ಸಂಸ್ಕೃತಿ ಕೇವಲ ಪ್ರದರ್ಶನಕ್ಕೆ ಸೀಮಿತವಲ್ಲ: ಪರಾಗ್ ಅಭ್ಯಂಕರ

ಹೊಸದಿಗಂತ ವರದಿ, ಬೆಂಗಳೂರು:

ಭಾರತದಲ್ಲಿ ರಾಜ್ಯಗಳು ಭೌಗೋಳಿಕವಾಗಿ ಬೇರೆಯಾಗಿದ್ದರೂ, ಸಾಂಸ್ಕೃತಿಕವಾಗಿ ನಾವೆಲ್ಲ ಒಂದಾಗಿದ್ದೇವೆ. ಪರಸ್ಪರರಲ್ಲಿ ಭಾವನಾತ್ಮಕ ಸಂಬಂಧವಿದೆ ಎಂದು ರಾ.ಸ್ವ. ಸಂಘದ ಅಖಿಲ ಭಾರತೀಯ ಸೇವಾ ಪ್ರಮುಖ ಪರಾಗ್ ಅಭ್ಯಂಕರ ಹೇಳಿದರು.‌

ನಗರದ ಜನಸೇವಾ ವಿದ್ಯಾಕೇಂದ್ರದಲ್ಲಿ ಯಂಗ್ ಥಿಂಕರ್ಸ್ 3ನೇ ಆವೃತ್ತಿ ಉದ್ಘಾಟಿಸಿ ಅವರು ಮಾತನಾಡಿದರು.

ಸಭ್ಯತೆ, ಸಂಸ್ಕೃತಿ, ಉನ್ನತ ಚಿಂತನ ಶೀಲತೆ ಭಾರತೀಯರಲ್ಲಿ ಅನಾದಿ ಕಾಲದಿಂದಲೂ ಇದೆ. ಇಲ್ಲಿನ ಅಪಾರ ಸಂಪತ್ತು ದೋಚಲು ಅನೇಕರು ಭಾರತಕ್ಕೆ ದಂಡೆತ್ತಿ ಬಂದರು. ಕೆಲವರು ಇಲ್ಲೇ ಉಳಿದು ರಾಜ್ಯಭಾರ ನಡೆಸಿದರು. ಭಾರತೀಯ ವಿಚಾರಧಾರೆ ಬದಲಿಸಲು ಯತ್ನಿಸಿದ ಪಾಶ್ಚಾತ್ಯರು ನಮ್ಮ ವೈಭವದ ಇತಿಹಾಸ ತಿರುಚಿದರು. ಕಮ್ಯುನಿಸ್ಟ್ ರು ಅಧಿಕಾರದಲ್ಲಿದ್ದ ಕಾರಣ ದುರಾದೃಷ್ಟವಶಾತ್ ಶಿಕ್ಷಣದ ಮೇಲೆ ನಕಾರಾತ್ಮವಾಗಿ ಪ್ರಭಾವ ಬೀರಿದರು ಎಂದರು.

ಈಗಿನ ಭಾರತದ ನಕಾಶೆ ಹೊರತಾಗಿ ಗಡಿಯಾಚೆಗೂ ನಮ್ಮ ಸಂಸ್ಕೃತಿ ಕಾಣಬಹುದು. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮುಂತಾದ ದೇಶಗಳು ಪ್ರಾಚೀನ ಭಾರತದ ಭಾಗಗಳಾಗಿದ್ದವು.
ಸಂಸ್ಕೃತಿ ಎಂದರೆ ಕೇವಲ ವೇದಿಕೆ ಮೇಲೆ‌ ಪ್ರದರ್ಶಿಸುವ ಕಾರ್ಯಕ್ರಮವಲ್ಲ‌ ಬದಲಾಗಿ ಜೀವನ ಪದ್ಧತಿ ಹಾಗೂ ಅದಕ್ಕಿರುವ ದೃಷ್ಟಿಕೋನ ಬಿಂಬಿಸುತ್ತದೆ. ಕೃತಿಗಳನ್ನು ಸರಿಯಾಗಿ ಮಾಡುವುದೇ ಸಂಸ್ಕೃತಿ ಎಂದರು.

ಜೈಪುರದ ಸಂಶೋಧಕಿ ನಿಹಾರಿಕಾ ಭಟ್ ಮಾತನಾಡಿ, ಭಾರತ 1947ರ ನಂತರ ನಿರ್ಮಾಣವಾದ ದೇಶವಲ್ಲ. ಇದು ಅತ್ಯಂತ ಪ್ರಾಚೀನ ನಾಗರಿಕತೆ. ನಮ್ಮ ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಹಿಂದೂ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳು ಹಾಸುಹೊಕ್ಕಿವೆ. ಹಿಂದೂ ಸಮಾಜ ವಿಶೇಷ ಪರಂಪರೆ ಹೊಂದಿದೆ. ಕಾಲಕಾಲಕ್ಕೆ ಸ್ವತಃ ಅವಲೋಕನ ಹಾಗೂ ಪ್ರಗತಿಗೆ ಒಳಪಡುತ್ತದೆ ಎಂದು ಹೇಳಿದರು.

ಪ್ರಾಂತ ಪ್ರಚಾರ ಪ್ರಮುಖ ರಾಜೇಶ ಪದ್ಮಾರ, ಸುರಭಿ ಹೊದಿಗೆರೆ ಇತರರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!