ಮೈಸೂರು ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ ಸಂಭ್ರಮ: ಸಿಎಂ ಸಿದ್ದರಾಮಯ್ಯರಿಂದ ಚಾಲನೆ

ಹೊಸದಿಗಂತ ವರದಿ,ಮೈಸೂರು :

ಮೈಸೂರು ಅರಮನೆ ಮಂಡಳಿ ವತಿಯಿಂದ ಶುಕ್ರವಾರ ರಾತ್ರಿ ಅರಮನೆ ಆವರಣದಲ್ಲಿ ಆಯೋಜಿಸಲಾಗಿರುವ ಅರಮನೆ ಫಲಪುಷ್ಪ ಪ್ರದರ್ಶನ ವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯನ ನವರು ಉದ್ಘಾಟಿಸಿದರು. ಬಳಿಕ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿ ಸಂತೋಷ ವ್ಯಕ್ತ ಪಡಿಸಿದರು.

ಕಳೆದ ಬಾರಿಯಂತೆ ಈ ವರ್ಷವೂ ಕೂಡ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರದರ್ಶನದಲ್ಲಿ ಜಿಲ್ಲೆಯ ಪ್ರಮುಖ ಆಕರ್ಷಕ ಕೇಂದ್ರಗಳಾದ ಸೋಮನಾಥೇಶ್ವರ ದೇವಾಲಯ, ಸಿರಿ ಧಾನ್ಯದಿಂದ ನಿರ್ಮಿಸಿದ ಮಲೆ ಮಹದೇಶ್ವರ ಪ್ರತಿಮೆ, ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ವಿಗ್ರಹ, ಬ್ರಾಂಡ್ ಮೈಸೂರು ಲೋಗೋ, 8 ಬಾರಿ ಅಂಬಾರಿ ಹೊತ್ತ ಅರ್ಜುನ ಅನೆ ಆಕೃತಿ, ನಾಲ್ವಡಿ ಕೃಷ್ಣ ರಾಜ ಒಡೆಯರ್, ಕೆಂಪ ನಂಜಮ್ಮಣಿ, ಶ್ರಿ ಕಂತ ದತ್ತ ಒಡೆಯರ್, ಮೈಸೂರು ಅರಮನೆ ಮಂಡಳಿ, ಹಾಗೂ ವಿವಿಧ ರೀತಿಯ ಪ್ರಾಣಿಗಳ ಪ್ರತಿಮೆಗಳು ಕಂಡುಬಂದವು.

ಹಣ್ಣುಗಳಿಂದ ಚಿತ್ರಿಸಿದ ಕಲಾಕೃತಿಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್ .ಸಿ ಮಹದೇವಪ್ಪ ಆಕೃತಿಗಳು ಜನರ ಮನ ಸೆಳೆದವು.

ವಿವಿಧ ರೀತಿಯ ಕಲಾಕೃತಿಗಳು, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್ ಹೀಗೆ ಮಕ್ಕಳಿಗೆ ಪ್ರಿಯವಾಗಿರುವ ಹೂಗಳಿಂದ ಅಲಂಕೃತಗೊಂಡ ವಿವಿಧ ಕಲಾಕೃತಿಗಳು, ಸೆಲ್ಫಿ ಪಾಯಿಂಟ್, ರಾಜ್ ಕುಮಾರ್, ಕ್ರಿಸ್ ಮಸ್ ಟ್ರೀ ಗಳು ಜನರನ್ನು ಆಕರ್ಷಿಸಿದವು.

ಮೈಸೂರು ಅರಮನೆ ಮಂಡಳಿ ವತಿಯಿಂದ ರಾಜ ಮನೆತನಕ್ಕೆ ಸೇರಿದ ಆಯ್ದ ಹಳೆಯ ಹಾಗೂ ಅಮೂಲ್ಯ ಛಾಯಾ ಚಿತ್ರಗಳು, ನವರಾತ್ರಿ ಸಂದರ್ಭದಲ್ಲಿ ಮನೆಗಳಲ್ಲಿ ಪ್ರದರ್ಶಿಸಿದ ಬೊಂಬೆಗಳು, ನಾಲ್ವಡಿ ಕೃಷ್ಣ ರಾಜ ಒಡೆಯರು ಮತ್ತು ಮೈಸೂರು ಅರಮನೆ ಕುರಿತು ವಿಡಿಯೋ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಸರ್ವರೂ ಸಮಾನರು ಎಂಬ ಸಂದೇಶವನ್ನು ಸಾರುವ ಸಂವಿಧಾನ ಪೀಠಿಕೆ, ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಸಮಾನತೆ, ಏಕತೆ ಮತ್ತು ಸಮಗ್ರತೆಯನ್ನು ಮೂಡಿಸುವಲ್ಲಿ ಸಂವಿಧಾನದ ಪಾತ್ರ ಮುಖ್ಯ ಎಂಬುದರ ವಿಷಯವನ್ನು ಪ್ರತಿಯೊಬ್ಬ ಸಾರ್ವಜನಿಕರಿಗೂ ತಿಳಿಸಲು ಭಾರತ ಸಂವಿಧಾನದ ಪ್ರಸ್ತಾವನೆಯನ್ನು ನಿರ್ಮಿಸಲಾಗಿತ್ತು.

ಅರಮನೆ ಅನೆಗಳಿಂದ ನಾಲ್ವಡಿ ಕೃಷ್ಣ ರಾಜ ಒಡೆಯರು, ಕೆಂಪ ನಂಜಮ್ಮಣಿ, ಶ್ರಿ ಕಂತ ದತ್ತ ಒಡೆಯರ್ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ .ಸಿ. ಮಹದೇವಪ್ಪ. ಶಾಸಕ ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ. ಕೆ. ವಿ ರಾಜೇಂದ್ರ, ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಭಾಗಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!