ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯದ ಬಳಿಕ 60 ವರ್ಷಗಳ ಕಾಲ ದೇಶ, ರಾಜ್ಯವನ್ನು ಕಾಂಗ್ರೆಸ್ ಆಳಿದ್ದರೂ, ಅಲ್ಪಸಂಖ್ಯಾತರಲ್ಲಿ ಶೇ 50ರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದರೆ ಅದಕ್ಕೆ ಯಾರು ಹೊಣೆಗಾರರು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಮಹಿಳೆ ವಿವಸ್ತ್ರ ಪ್ರಕರಣ, ಶಾಲಾ ಮಕ್ಕಳಿಂದ ಶೌಚಾಲಯ ಶುಚಿ ಇವೆಲ್ಲ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುದರ ಸಂಕೇತ. ಇಂದು ರಾಜ್ಯದಲ್ಲಿ ಸಿಎಂ ಇದ್ದಾರಾ? ಸಚಿವರು ಇದ್ದಾರಾ? ಎಂದು ಪ್ರಶ್ನಿಸುವಂತಾಗಿದೆ ಎಂದ ಅವರು, ರಾಜ್ಯದಲ್ಲಿ ಬರಗಾಲವಿದ್ದರೂ ಸಚಿವರು ಅಧಿಕಾರಿಗಳ ಸಭೆ ನಡೆಸಿಲ್ಲ. ಇನ್ನೊಂದೆಡೆ ಹಿಜಾಬ್ ಅವಕಾಶ ಕೊಡುವುದಾಗಿ ಹೇಳಿಕೆ ನೀಡಲಾಗುತ್ತಿದೆ. ಇನ್ನೊಂದೆಡೆ ಹಿಂದು ಹೆಣ್ಮಕ್ಕಳ ತಾಳಿ, ಕಾಲುಂಗುರ ತೆಗೆಸಲಾಗುತ್ತಿದೆ. ನೀವು ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಎಂದು ನೆನಪಿನಲ್ಲಿಡಿ, ಒಡೆದಾಳುವ ನೀತಿಯನ್ನು ಕೈಬಿಡಿ ಎಂದು ಹೇಳಿದರು.
ನಿಮ್ಮದು ಅಲ್ಪಸಂಖ್ಯಾತರ ಕುರಿತು ಕೇವಲ ಭಾಷಣ ಮಾತ್ರ. ಅವರಿಗಾಗಿ ಯಾವುದಾದರೂ ಯೋಜನೆ ರೂಪಿಸಿ ಮೇಲೆತ್ತಿದ್ದೀರಾ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ವಿಜಯೇಂದ್ರ, ಅಲ್ಪಸಂಖ್ಯಾತರು ನಿರುದ್ಯೋಗ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳನ್ನು ಎದುರಿಸಲು ಕಾಂಗ್ರೆಸ್ಸೇ ಕಾರಣ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಿಂದೆ 5 ವರ್ಷ ಪರಿಪೂರ್ಣವಾಗಿ ನೀವು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೀರಿ. ಮತ್ತೆ ಅಧಿಕಾರ ಸಿಗುವುದು ಕಷ್ಟ ಎಂಬ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಒಡೆಯಲು ಮುಂದಾಗಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಿ ಎಂದು ಸಿಎಂಗೆ ವಿಜಯೇಂದ್ರ ನೆನಪಿಸಿದರು.
ಸಿದ್ದರಾಮಯ್ಯನವರೇ ನೀವೇನು ಮಾಡಿದ್ದೀರಿ?
ಈ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತ ಮಹಿಳೆ ಗೌರವ, ಸ್ವಾಭಿಮಾನದಿಂದ ಬಾಳಿ ಬದುಕಬೇಕೆಂಬ ದೃಷ್ಟಿಕೋನದೊಂದಿಗೆ ತ್ರಿವಳಿ ತಲಾಖ್ ಅನ್ನು ರದ್ದು ಮಾಡಿದ್ದಾರೆ. ನೀವೇನು ಮಾಡಿದ್ದೀರಿ? ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ವಿಜಯೇಂದ್ರ, ಕಾಂಗ್ರೆಸ್ ಪಕ್ಷ ಹತಾಶೆಯಿಂದ ಸಮಾಜ ಸಮಾಜದ ಮಧ್ಯೆ, ಧರ್ಮ ಧರ್ಮದ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಸರಕಾರದ ಒಡೆದಾಳುವ ನೀತಿಯನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು. ಸಂಸದ ಡಾ.ಉಮೇಶ್ ಜಾಧವ್, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಈ ಸಂದರ್ಭ ಉಪಸ್ಥಿತರಿದ್ದರು.