ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ನಡೆದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರವಾಗಿ ಕರ್ನಾಟಕ ಮತ್ತು ಕೇರಳ ಸರ್ಕಾರಗಳ ನಡುವೆ ವಾಕ್ಸಮರ ನಡೆದಿತ್ತು. ಈ ಬೆನ್ನಲ್ಲೇ ಕೇರಳದ ವರ್ಕಲಾದಲ್ಲಿ ನಡೆದ ಶಿವಗಿರಿ ಮಠದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಪಿಣರಾಯಿ ವಿಜಯನ್ ಪರಸ್ಪರ ವೇದಿಕೆ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ತೆರವುಗೊಳಿಸಿದ್ದನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಕಟುವಾಗಿ ಟೀಕಿಸಿದ್ದರು. “ಕರ್ನಾಟಕದಲ್ಲಿ ಉತ್ತರ ಪ್ರದೇಶದ ಮಾದರಿಯಂತೆ ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿ ಧ್ವಂಸ ಮಾಡಲಾಗುತ್ತಿದೆ” ಎಂದು ಅವರು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್, “ಸತ್ಯ ತಿಳಿಯದೇ ವಿಜಯನ್ ಅವರು ಚುನಾವಣಾ ಗಿಮಿಕ್‌ಗಾಗಿ ಇಂತಹ ಹೇಳಿಕೆ ನೀಡಬಾರದು” ಎಂದು ಖಡಕ್ ಉತ್ತರ ನೀಡಿದ್ದರು.
ಬುಧವಾರ ನಡೆದ 93ನೇ ಶಿವಗಿರಿ ತೀರ್ಥಯಾತ್ರೆಯ ವೇದಿಕೆಯಲ್ಲಿ ಇಬ್ಬರೂ ನಾಯಕರು ಮುಖಾಮುಖಿಯಾದರು. ರಾಜಕೀಯ ಸಂಘರ್ಷದ ನಂತರ ಮೊದಲ ಬಾರಿಗೆ ಭೇಟಿಯಾದ ಈ ನಾಯಕರು ಅತ್ಯಂತ ಆತ್ಮೀಯವಾಗಿ ಮಾತನಾಡಿದರು.
ಸಿದ್ದರಾಮಯ್ಯ ಅವರ ಭಾಷಣಕ್ಕೂ ಮುನ್ನವೇ ಪಿಣರಾಯಿ ವಿಜಯನ್ ಅವರು ಹೊರಡಬೇಕಿತ್ತು. ಆದರೆ, ತೆರಳುವ ಮುನ್ನ ಸಿದ್ದರಾಮಯ್ಯ ಅವರ ಬಳಿ ತೆರಳಿ, ಸಚಿವ ಸಂಪುಟ ಸಭೆಯ ತುರ್ತು ಇರುವ ಕಾರಣ ಹೊರಡುತ್ತಿರುವುದಾಗಿ ತಿಳಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.
ರಾಜಕೀಯವಾಗಿ ವಾಗ್ವಾದಗಳು ಏನೇ ಇದ್ದರೂ, ಸಾರ್ವಜನಿಕ ವೇದಿಕೆಯಲ್ಲಿ ಇಬ್ಬರೂ ಮುಖ್ಯಮಂತ್ರಿಗಳು ತೋರಿದ ಸೌಜನ್ಯವು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

