24ನೇ ವೀರಶೈವ ಲಿಂಗಾಯತ ಅಧಿವೇಶನ: 8 ನಿರ್ಣಯಗಳ ಮಂಡನೆ

ಹೊಸ ದಿಗಂತ ವರದಿ, ದಾವಣಗೆರೆ

ವಿಶ್ವ ಗುರು ಬಸವಣ್ಣನವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸುವುದು, ಎಲ್ಲ ಒಳಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡುವುದು, ಕಾಂತರಾಜ ವರದಿ ತಿರಸ್ಕರಿಸಿ ಹೊಸದಾಗಿ ವೈಜ್ಞಾನಿಕ ರೀತಿಯಲ್ಲಿ ಜಾತಿ ಗಣತಿ ನಡೆಸುವುದೂ ಸೇರಿದಂತೆ 8 ಪ್ರಮುಖ ನಿರ್ಣಯಗಳನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಕೈಗೊಳ್ಳಲಾಗಿದೆ.

ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ಮುಕ್ತಾಯಗೊಂಡ ಮಹಾಧಿವೇಶನದಲ್ಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ನಿರ್ಣಯಗಳನ್ನು ಮಂಡಿಸಿದರು. ಮಠಾಧೀಶರು, ಸಮಾಜದ ಮುಖಂಡರು, ಸಮಾಜ ಬಾಂಧವರು ಕರತಾಡನ ಮಾಡುವ ಮೂಲಕ ನಿರ್ಣಯಗಳಿಗೆ ಸಮ್ಮತಿ ಸೂಚಿಸಿದರು.

ನಿರ್ಣಯಗಳು:

1. ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಗೆ ಮಹಾಸಭಾ ಹಾಗೂ ಸಮಾಜ ಸದಾ ಕಟಿಬದ್ಧವಾಗಿದ್ದು, ಅಂತಹ ಯಾವುದೇ ಹೋರಾಟ, ಪ್ರಯತ್ನಗಳಿಗೆ ಹಿಂದಿನಂತೆಯೇ ಪ್ರೋತ್ಸಾಹ, ಬೆಂಬಲ ನೀಡಲಾಗುವುದು.
2. ಹನ್ನೆರಡನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಸಂಸತ್ತಿನ ಮತ್ತು ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ಕಟ್ಟಿಕೊಟ್ಟ ಮಹಾನ್ ಮಾನವತಾವಾದಿ, ಸಾಮಾಜಿಕ ಕ್ರಾಂತಿಯ ಹರಿಕಾರ, ಜಗಜ್ಯೋತಿ ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು.
3. ವೀರಶೈವ ಲಿಂಗಾಯತ ಸಮುದಾಯದಲ್ಲಿ ಲಕ್ಷಾಂತರ ಕಡು ಬಡವರಿದ್ದು, ಸಮುದಾಯದ ಎಲ್ಲಾ ಒಳ ಪಂಗಡಗಳನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ(ಓಬಿಸಿ) ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ಕೇಂದ್ರ ಸರ್ಕಾರ ಈ ಶಿಫಾರಸ್ಸನ್ನು ಅಂಗೀಕರಿಸಬೇಕು.
4. ಪ್ರಸ್ತುತ ಚರ್ಚೆಯ ವಸ್ತುವಾಗಿರುವ ಸಾಮಾಜಿಕ, ಶೈಕ್ಷಣಿಕ ಸ್ಥಿತಗತಿಯ ಸಮೀಕ್ಷೆ ಅಂದರೆ ಜಾತಿ ಜನಗಣತಿ ಸುಮಾರು 8 ವರ್ಷಗಳಷ್ಟು ಹಳೆಯದಾಗಿದ್ದು, ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಳ್ಳದೇ, ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡಗಳನ್ನು ಒಳಗೊಂಡಂತೆ ವಾಸ್ತವಿಕತೆ ಆಧಾರದ ಮೇಲೆ ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಬೇಕು.
5. ಸಮಾಜದ ಒಳಿತಿಗಾಗಿ ಮತ್ತು ನಮ್ಮ ಸಮುದಾಯದ ನಿಖರ ಜನಸಂಖ್ಯೆಯ ಬಗ್ಗೆ ಜಗತ್ತಿಗೆ ತಿಳಿಸಲು ಸರ್ಕಾರದ ಮುಂದಿನ ಜನಗಣತಿಯ ವೇಳೆ ಸಮಾಜ ಬಾಂಧವರು ಹಿಂದೂ ಧರ್ಮ ಮತ್ತು ತಮ್ಮ ಉಪ ಜಾತಿಯ ಹೆಸರನ್ನು ಬರೆಸದೇ, ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸಬೇಕು.
6. ಎಲ್ಲಾ ರೈತರಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು.
7. ರಾಜ್ಯದ ನಮ್ಮ ಸಮುದಾಯದ ಪ್ರಥಮ ಮುಖ್ಯಮಂತ್ರಿ ಲಿಂಗೈಕ್ಯ ಎಸ್.ನಿಜಲಿಂಗಪ್ಪನವರು ವಾಸವಿದ್ದ ಚಿತ್ರದುರ್ಗದ ನಿವಾಸವನ್ನು ಸರ್ಕಾರ ಖರೀದಿಸಿ, ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕು. ನಿಜಲಿಂಗಪ್ಪನವರ ಸರಳತೆ, ಉದಾತ್ತ ಚಿಂತನೆ, ದಕ್ಷ ಆಡಳಿತದ ಸಮ್ಯಕ್ ಚಿತ್ರಣವನ್ನು ನಾಡಿನ ಜನತೆಗೆ ಕಟ್ಟಿ ಕೊಡುವಂತೆ ಅರ್ಥಪೂರ್ಣವಾಗಿ ಶಾಶ್ವತ ಸ್ಮಾರಕ ನಿರ್ಮಾಣಕ್ಕೆ ನಿಜಲಿಂಗಪ್ಪನವರ ಪುಣ್ಯಸ್ಮರಣೆ ದಿನವಾದ 2024 ಆಗಸ್ಟ್ 8ರೊಳಗೆ ಸರ್ಕಾರ ಕ್ರಮ ವಹಿಸಬೇಕು.
8. ಮಹಾಸಭಾದ 24ನೇ ಮಹಾಧಿವೇಶನವನ್ನು ನಡೆಸಲು ಮಾರ್ಗದರ್ಶನ ಮಾಡಿದ ಎಲ್ಲರಿಗೂ ಮಹಾಸಭಾದಿಂದ ಕೃತಜ್ಞತೆ ಸಮರ್ಪಿಸುವ ನಿರ್ಣಯ ಅಂಗೀಕರಿಸಲಾಗಿದೆ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!