ಕ್ರಿಸ್ಮಸ್ ಎಂದೊಡನೆ ಚೀನಾ ಏಕೆ ತಲೆಕೆಡಿಸಿಕೊಳ್ಳುತ್ತದೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಮ್ಯುನಿಸ್ಟ್ ದೇಶ ಚೀನಾದಲ್ಲಿ ಯಾವುದೇ ಬಗೆಯ ಮತಾಚರಣೆಗಳಿಗೆ ಪ್ರೋತ್ಸಾಹವಿಲ್ಲ. ಹಾಗಂತ ಎಲ್ಲವನ್ನೂ ಎಲ್ಲ ಕಡೆ ಪ್ರತಿಬಂಧಿಸುವ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಗಳೇನೂ ಅಲ್ಲಿಲ್ಲ. ಹಾಗೆಂದೇ, ಶಾಂಘೈನಂಥ ಪ್ರಮುಖ ಪಟ್ಟಣಗಳಲ್ಲಿ ಕ್ರಿಸ್ಮಸ್ ಗಿಡದ ಅಲಂಕಾರ, ಸಾಂತಾಕ್ಲಾಸ್ ಧಿರಿಸು ಇವೆಲ್ಲವೂ ಕಂಡುಬರುತ್ತವೆ. ಆದರೆ, ಚೀನಾದ ಹಲವು ಪ್ರಾಂತ್ಯಗಳಲ್ಲಿ ಸಾಮಾಜಿಕ ಸ್ತರದಲ್ಲೇ ಕ್ರಿಸ್ಮಸ್ ಥರದ ಆಚರಣೆಗಳಿಗೆ ಒಂದು ಪ್ರತಿರೋಧವಿದೆ.

ಉದಾಹರಣೆಗೆ, ಚೀನಾದ ನೈರುತ್ಯ ಭಾಗದಲ್ಲಿರುವ ಯುನಾನ್ ಪ್ರಾಂತ್ಯದಲ್ಲಿ ಅಲ್ಲಿನ ಆಸ್ತಿ ನಿರ್ವಹಣಾ ಕಂಪನಿಗಳು ತಮ್ಮ ಬಾಡಿಗೆದಾರರಿಗೆ ಮನೆಯಲ್ಲಿ ಕ್ರಿಸ್ಮಸ್ ಅಲಂಕಾರಗಳನ್ನು ಮಾಡದಿರುವಂತೆ ಹಾಗೂ ಕ್ರಿಸ್ಮಸ್ ಕಾರ್ಡುಗಳನ್ನು ಹಂಚದಿರುವಂತೆ ಸೂಚಿಸಿರುವುದಾಗಿ ವರದಿಗಳಾಗಿವೆ. ಇದಕ್ಕೆ ಅವರು ಕೊಡುತ್ತಿರುವ ಕಾರಣವೆಂದರೆ- ಪಾಶ್ಚಾತ್ಯ ಸಂಸ್ಕೃತಿಯನ್ನು ಜನರು ಕುರುಡಾಗಿ ಅನುಸರಿಸಬಾರದು, ಬದಲಿಗೆ ಉತ್ಸವಗಳನ್ನು ನಡೆಸುವುದಾದರೆ ಚೀನಾ ಸಂಸ್ಕೃತಿಯಲ್ಲೇ ಅದಕ್ಕೆ ಪೂರಕ ಅಂಶಗಳಿವೆ ಎಂಬುದು.

ಚೀನಾದ ಗನ್ಶು ಪ್ರಾಂತ್ಯದಲ್ಲಿ ಯೂಥ್ ಕಮ್ಯುನಿಸ್ಟ್ ಆಂದೋಲನದಲ್ಲಿರುವವರು ಅಲ್ಲಿನ ಸಮಾಜವು ಕ್ರಿಸ್ಮಸ್ ಆಚರಿಸುವುದನ್ನು ಪ್ರತಿರೋಧಿಸಿ ತಿಳಿಹೇಳುತ್ತಿದ್ದಾರೆ. ಆಚರಣೆಯ ಸಂಭ್ರಮವೇ ಬೇಕು ಎನ್ನುವುದಿದ್ದರೆ, ಕೊರಿಯಾ ಯುದ್ಧದಲ್ಲಿ ಅಮೆರಿಕ ಪಡೆಗಳ ವಿರುದ್ಧ ಹೋರಾಡಿದ ಚೀನಾ ಯೋಧರ ನೆನಪಲ್ಲಿ ಹಬ್ಬ ಮಾಡಿ ಎನ್ನುತ್ತಿದ್ದಾರೆ ಈ ರಾಜಕೀಯ ಕಾರ್ಯಕರ್ತರು.

ಚೀನಾದ ಹಲವು ಪ್ರಾಂತ್ಯಗಳಲ್ಲಿ ಶಾಲಾ ಮಕ್ಕಳು ಸಹ ಕ್ರಿಸ್ಮಸ್ ಆಚರಣೆಯತ್ತ ಆಕರ್ಷಿತಗೊಳ್ಳದಂತೆ ನೋಡಿಕೊಳ್ಳುವುದಕ್ಕೆ ಪಾಲಕರನ್ನು ಕೇಳಿಕೊಳ್ಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!