ಯೇಸುಕ್ರಿಸ್ತನ ಆದರ್ಶಗಳು ದೇಶದ ಅಭಿವೃದ್ಧಿ ಪಯಣಕ್ಕೆ ಮಾರ್ಗದರ್ಶಕ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಇಂದು ಕ್ರಿಸ್​ಮಸ್​ ಹಬ್ಬದ ಸಂಭ್ರಮ-ಸಡಗರ. ದೆಹಲಿಯಲ್ಲಿ ಕ್ರಿಸ್​ಮಸ್​ ಸಂಭ್ರಮ ಮನೆ ಮಾಡಿದ್ದೂ, ಖುದ್ದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಕ್ರೈಸ್ತ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

ನಾನು ಕ್ರಿಶ್ಚಿಯನ್ ಸಮುದಾಯದೊಂದಿಗೆ ಅತ್ಯಂತ ಹಳೆಯ ಮತ್ತು ನಿಕಟ ಸಂಬಂಧವನ್ನು ಹೊಂದಿದ್ದೇನೆ. ಗುಜರಾತಿನ ಮುಖ್ಯಮಂತ್ರಿ ಆಗಿದ್ದ ವೇಳೆ ನಾನು ಆಗಾಗ ಕ್ರೈಸ್ತ ಸಮುದಾಯ ಮತ್ತು ಅವರ ಮುಖಂಡರನ್ನು ಭೇಟಿಯಾಗುತ್ತಿದ್ದೆ ಎಂದು ಹೇಳಿದ್ದಾರೆ.

ಕ್ರಿಸ್​ಮಸ್​ ನಾವು ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸುವ ದಿನ. ಅವರ ಜೀವನ ಸಂದೇಶ ಮತ್ತು ಮೌಲ್ಯಗಳನ್ನು ನೆನಪಿಸಿಕೊಳ್ಳುವ ಸಂದರ್ಭವೂ ಇದಾಗಿದೆ. ಅವರು ದಯೆ ಮತ್ತು ಸೇವೆಯ ಆದರ್ಶಗಳನ್ನಿಟ್ಟುಕೊಂಡು ಬದುಕಿದವರು. ಎಲ್ಲರಿಗೂ ನ್ಯಾಯ ಸಿಗುವ ಸಮಾಜವನ್ನು ರೂಪಿಸುವ ಕೆಲಸ ಮಾಡಿದರು. ಈ ಆದರ್ಶಗಳು ನಮ್ಮ ದೇಶದ ಅಭಿವೃದ್ಧಿ ಪಯಣಕ್ಕೆ ಮಾರ್ಗದರ್ಶಕ ಬೆಳಕಿನಂತೆ ಕೆಲಸ ಮಾಡುತ್ತವೆ ಎಂದರು.

ಸರ್ಕಾರದ ಅಭಿವೃದ್ಧಿಯ ಪ್ರಯೋಜನಗಳು ಎಲ್ಲರಿಗೂ ತಲುಪುವಂತೆ ಮಾಡುತ್ತಿದ್ದೇವೆ. ನಾವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಂತ್ರವನ್ನು ನಂಬುತ್ತೇವೆ. ನಮ್ಮ ಸರ್ಕಾರದ ಎಲ್ಲ ಯೋಜನೆಗಳು ಸಕಾಲದಲ್ಲಿ ಎಲ್ಲರಿಗೂ ತಲುಪುವಂತೆ ಮಾಡಿದ್ದೇವೆ. ಅದರಿಂದ ಯಾರು ವಂಚಿತರಾಗಬಾರದು ಎಂದು ಹೇಳಿದರು.

ಇಂದು ದೇಶದಲ್ಲಿ ಆಗುತ್ತಿರುವ ಅಭಿವೃದ್ಧಿಯ ಲಾಭಗಳು ಕ್ರೈಸ್ತ ಸಮುದಾಯದ ಜನರಿಗೆ ಅದರಲ್ಲೂ ಬಡವರು, ವಂಚಿತರಿಗೆ ತಲುಪುತ್ತಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ರಚಿಸುವ ಗುರಿಯೊಂದಿಗೆ, ನಾವು ತ್ವರಿತಗತಿಯಲ್ಲಿ ಮುನ್ನಡೆಯುತ್ತಿದ್ದೇವೆ. ಈ ಅಭಿವೃದ್ಧಿ ಪಯಣದಲ್ಲಿ ನಮ್ಮ ಯುವಕರು ನಮ್ಮ ಪ್ರಮುಖ ಪಾಲುದಾರರಾಗಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!