ಹೊಸದಿಗಂತ ವರದಿ ಬೆಂಗಳೂರು:
ರಾಜ್ಯ ಸರಕಾರವು ಯುವನೀತಿ ಅನುಷ್ಠಾನದ ವೇಳೆ ಕರ್ನಾಟಕದ ಯುವಜನರನ್ನು ವಂಚಿಸಿದೆ ಎಂದು ರಾಜ್ಯ ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯುವನೀತಿ ಕುರಿತ ಪ್ರಣಾಳಿಕೆಯಲ್ಲಿ ಪದವಿ ಪಡೆದ ಎಲ್ಲ ನಿರುದ್ಯೋಗಿಗಳಿಗೆ 3 ಸಾವಿರ, ಡಿಪ್ಲೊಮಾ ಮಾಡಿದ ನಿರುದ್ಯೋಗಿಗೆ ಒಂದೂವರೆ ಸಾವಿರ ಕೊಡುವುದಾಗಿ ಹೇಳಿದ್ದರು. ಡಿಗ್ರಿ ಮತ್ತು ಡಿಪ್ಲೊಮಾ ಆದ 40 ಲಕ್ಷ ಜನರಿದ್ದಾರೆ. ಆದರೆ, ಬಿಜೆಪಿ ಯುವನೀತಿ ಅನುಷ್ಠಾನ ವಿಳಂಬದ ಕುರಿತು ಟೀಕಿಸಿದ ಬಳಿಕ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
2022-23ರಲ್ಲಿ ಡಿಗ್ರಿ ಪಡೆದ 4 ಲಕ್ಷ ಯುವಕರು, 48 ಸಾವಿರ ಜನ ಡಿಪ್ಲೊಮಾ ಪಡೆದವರು ಎಂದು ಅಂದಾಜು ಮಾಡಿದ್ದಾರೆ. ಅದರಲ್ಲಿ ಉದ್ಯೋಗ ಪಡೆದವರನ್ನು ಕೈಬಿಟ್ಟು ಹೆಚ್ಚು ಕಡಿಮೆ 3 ರಿಂದ 3.5 ಲಕ್ಷ ನಿರುದ್ಯೋಗಿಗಳಿಗೆ 600- 700 ಕೋಟಿ ಖರ್ಚು ಮಾಡಿ ಯುವನೀತಿ ಅನುಷ್ಠಾನ ಮಾಡಿದ್ದಾಗಿ ಹೇಳಿ ಹೆಮ್ಮೆಪಡುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಹಿಂದೆ, ಪದವಿ- ಡಿಪ್ಲೊಮಾ ಪಡೆದ ಎಲ್ಲ ನಿರುದ್ಯೋಗಿಗಳಿಗೆ ಭತ್ಯೆ ಕೊಡುವ ಘೋಷಣೆ ಮಾಡಿದ್ದರು. ಈಗ 2022-23ನೇ ಸಾಲು ಎಂದಿದ್ದಾರೆ. ನೈಜ ಮಾನದಂಡದ ಪ್ರಕಾರ ಅನುಷ್ಠಾನ ಆದರೆ, 10 ಸಾವಿರ ಕೋಟಿಯಾದರೂ ಬೇಕಿತ್ತು ಎಂದು ವಿಶ್ಲೇಷಿಸಿದರು. ಕೇವಲ ಮತಕ್ಕಾಗಿ ಪಂಚ ಗ್ಯಾರಂಟಿ ಜಾರಿ ಮಾಡಿದ್ದಾರೆ. ನಿಜವಾಗಿ ಗ್ಯಾರಂಟಿ ಅನುಷ್ಠಾನದಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಯಾವುದೇ ಶಿಸ್ತು ಮತ್ತು ಅಶಿಸ್ತು ಸೇರಿದಂತೆ ಪಕ್ಷದ ಮುಖಂಡರ ಎಲ್ಲ ಚಟುವಟಿಕೆಗಳನ್ನು ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ತಂಡಗಳು ಕಾಲಕಾಲಕ್ಕೆ ಗಮನಿಸಲಿವೆ. ಸಕಾಲದಲ್ಲಿ ಸರಿಯಾದ ನಿರ್ಧಾರ ಆಗಲಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಸರಕಾರವು ಹಿಂಸಾಚಾರ ಇಲ್ಲದೆ ಇದನ್ನು ಅನುಷ್ಠಾನಕ್ಕೆ ತರಬೇಕಿದೆ. ಸರಕಾರವು ಹಿಂಸಾಚಾರಕ್ಕೆ ಎಡೆ ಕೊಡದಿರಲಿ. ಆದರೆ, ಕನ್ನಡದ ಸಾರ್ವಭೌಮತೆಗಾಗಿ ಬೀದಿಯಲ್ಲಿ ನಿಂತು ಕೂಗುವ ಪರಿಸ್ಥಿತಿಯೂ ಬರಬಾರದು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.