ಹೊಸದಿಗಂತ ವರದಿ ಶಿವಮೊಗ್ಗ:
ಶಿವಮೊಗ್ಗ ಹಾಲು ಒಕ್ಕೂಟದಿಂದ ರೈತರಿಂದ ಖರೀದಿ ಮಾಡುತ್ತಿರುವ ಹಾಲಿನ ದರವನ್ನು ಲೀಟರ್ಗೆ 2 ರೂ. ಇಳಿಸಲಾಗಿದೆ. ತಕ್ಷಣ ದರ ಹೆಚ್ಚಳ ಮಾಡದೇ ಇದ್ದರೆ ಬಿಜೆಪಿ ರೈತರೊಂದಿಗೆ ಹೋರಾಟಕ್ಕೆ ಇಳಿಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ 3 ರೂ. ಏರಿಸಿ ಅದನ್ನು ರೈತರಿಗೆ ನೀಡುವುದಾಗಿ ಹೇಳಿತ್ತು. ಆದರೆ ಶಿವಮೊಗ್ಗ ಹಾಲು ಒಕ್ಕೂಟದಿಂದ ರೈತರಿಂದ ಖರೀದಿ ಮಾಡುತ್ತಿರುವ ಹಾಲಿನ ದರವನ್ನು ಲೀಟರ್ಗೆ 2 ರೂ. ಇಳಿಕೆ ಮಾಡಲಾಗಿದೆ. ಹಾಲಿನ ಕೊಬ್ಬಿನಾಂಶದ ಮೇಲೆ 35 ರೂ. ಕೊಡುತ್ತಿದ್ದ ದರವನ್ನು 28 ರೂ.ವರೆಗೆ ಇಳಿಕೆ ಮಾಡಲಾಗಿದೆ. ಈ ಮೂಲಕ ರೈತರ ಮೇಲೆ ಬರೆ ಎಳೆಯಲಾಗಿದೆ ಎಂದರು.
ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಕೋಟ್ಯಂತರ ರೂ. ನಷ್ಟ ಅನು‘ವಿಸುತ್ತಿವೆ. ಪ್ರತಿ ಹಾಲು ಒಕ್ಕೂಟ 15,20,30 ಕೋಟಿ ರೂ. ನಷ್ಟದ ಮೂಲಕ ಐಸಿಯು ಸೇರಿವೆ. ರೈತರಿಗೆ ಕೊಡುವುದಾಗಿ ಹೇಳಿ ಗ್ರಾಹಕರಿಗೆ ಕೊಡುವ ಹಾಲಿನ ದರವನ್ನು 3 ರೂ ಏರಿಸಿದ್ದರು. ಈಗ ರೈತರಿಗೆ ಬರೆ ಹಾಲಿದ್ದಾರೆ. ಜೊತೆಗೆ 1200 ರೂ. ಒಂದು ಚೀಲಕ್ಕೆ ಇದ್ದ ಪಶು ಆಹಾರದ ದರವನ್ನು 1250 ರೂ.ಗೆ ಏರಿಕೆ ಮಾಡಿದ್ದಾರೆ. ಪಶು ಆಹಾರ ದರವನ್ನು ಇಳಿಕೆ ಮಾಡಬೇಕು.
ಇದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ. ರಾಜ್ಯ ಸರ್ಕಾರ ಹಾಲು ಒಕ್ಕೂಟಗಳ ಆರ್ಥಿಕ ಸಂಕಷ್ಟವನ್ನು ಬಗೆಹರಿಸಬೇಕು. ರೈತರಿಗೆ ಆಗುತ್ತಿರುವ ಅನ್ಯಾಯ ನೋಡಿಕೊಂಡು ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರು, ಪ್ರಮುಖರಾದ ರತ್ನಾಕರ ಶೆಣೈ, ಗಂಗಾಧರ ಮಂಡೇನಕೊಪ್ಪ, ಹೃಷಿಕೇಶ್ ಪೈ, ಶ್ರೀನಾಥ್, ಅಣ್ಣಪ್ಪ, ದಿನೇಶ್ ಸುದ್ದಿಗೋಷ್ಟಿಯಲ್ಲಿದ್ದರು