- ಜಿ.ವಿ. ದೀಪಾವಳಿ
ರಾಣೇಬೆನ್ನೂರ: ಹಾವೇರಿ ಜಿಲ್ಲಾದ್ಯಂತ ಕಳೆದ 5 ವರ್ಷಗಳಲ್ಲಿ 562 ಅಂತರ್ ಜಾತಿ ಮದುವೆ ನಡೆಯುವ ಮೂಲಕ ಸಾಮರಸ್ಯದ ಬಾಳ್ವೆಗೆ ಯುವ ಪೀಳಿಗೆ ದಂಪತಿಗಳು ಕಾಲಿಟ್ಟಿರುವುದು ವಿಶೇಷವಾಗಿದೆ.
2019ನೇ ಸಾಲಿನಲ್ಲಿ 85 ಜೋಡಿ, 2020 ರಲ್ಲಿ 97, 2021 ರಲ್ಲಿ 167, 2022ರಲ್ಲಿ 138, 2023ರ ಈವರೆಗೂ 75 ಜೋಡಿಗಳು ಸೇರಿ ಒಟ್ಟು 562 ಜೋಡಿಗಳು ಜಾತಿಯ ಸಂಕೋಲೆ ಕಳಚಿ, ಪ್ರೇಮ ವಿವಾಹದ ಮೂಲಕ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ.
ಅರ್ಹ ಜೋಡಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಪ್ರೋತ್ಸಾಹ ಧನ ನೀಡುತ್ತಿದ್ದು, ನೂತನ ದಂಪತಿಗಳ ಬದುಕಿಗೆ ನೆರವಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಗೆ ಕಳೆದ ಐದು ವರ್ಷಗಳಲ್ಲಿ 562 ಜೋಡಿಗಳು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಅದರಲ್ಲಿ ದಾಖಲಾತಿ ಕೊರತೆಯಿಂದ 20 ಜೋಡಿಗಳಿಗೆ ಈವರೆಗೂ ಪರಿಹಾರ ಬಂದಿಲ್ಲ. ಉಳಿದ ಜೋಡಿಗಳಲ್ಲಿ ಪರಿಶಿಷ್ಟ ಜಾತಿ ಯುವಕವನ್ನು ಮದುವೆಯಾದ ತಲಾ ಒಂದು ಜೋಡಿಗೆ 3 ಲಕ್ಷ ರೂ.ನಂತೆ ಹಾಗೂ ಎಸ್ಸಿ ಜಾತಿಯ ಯುವಕ ಎಸ್ಟಿ, ಎಸ್‌ಸಿಗೆ ಸೇರಿದ ಯುವತಿಯನ್ನು ಮದುವೆಯಾದ ತಲಾ ಒಂದು ಜೋಡಿಗೆ 2.50 ಲಕ್ಷ ರೂ.ನಂತೆ ಈವರೆಗೂ ಒಟ್ಟು 13.78 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗಿದೆ.
ಖುದ್ದು ಪರಿಶೀಲನೆ
ಸರ್ಕಾರದಿಂದ ನೀಡುವ ಪ್ರೋತ್ಸಾಹ ಧನಕ್ಕಾಗಿ ಅಂತರ್ಜಾತಿ ಮದುವೆಯಾಗಿ ನಂತರ ದಂಪತಿ ಬೇರೆಯಾಗುತ್ತಿದ್ದಾರೆ ಎಂಬ ಆರೋಪಗಳು ಅಲ್ಲಲ್ಲಿ ಕೇಳಿ ಬಂದಿವೆಯಾದರೂ, ಜಿಲ್ಲೆಯಲ್ಲಿ ಈವರೆಗೆ ಇಂತಹ ಪ್ರಕರಣ ದಾಖಲಾಗಿಲ್ಲ. ಹಂತ ಹಂತವಾಗಿ ಪ್ರೋತ್ಸಾಹ ಧನ ನೀಡುವುದರಿಂದ ಯೋಜನೆ ದುರುಪಯೋಗಿಸಿಕೊಳ್ಳವುದು ತೀರ ವಿರಳ. ಹಣ ಪಾವತಿಸುವಾಗ ಮದುವೆಯಾದ ಜೋಡಿ ವಾಸಿಸುವ ಸ್ಥಳಕ್ಕೆ ಇಲಾಖೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಾರೆ.
ಮಾಹಿತಿ ಕೊರತೆ
ಸರಳ ವಿವಾಹದ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ೫೦ ಸಾವಿರ ರೂ. ವಿಶೇಷ ಪ್ರೋತ್ಸಾಹ ಧನ ನೀಡಲಾಗುತ್ತಿದೆ. 2019 ರಿಂದ 2023ರ ವರೆಗೆ ಅಂತರ್ ಜಾತಿ ವಿವಾಹ ಯೋಜನೆಯ ಮಾಹಿತಿ ಕೊರತೆಯಿಂದ ಕಳೆದ 5 ವರ್ಷಗಳಲ್ಲಿ ಒಟ್ಟು 31 ಜೋಡಿಗಳಿಗೆ ಈವರೆಗೆ ಪ್ರೋತ್ಸಾಹ ಧನ ಮಂಜೂರಾಗಿಲ್ಲ. ಪ್ರೋತ್ಸಾಹ ಧನ ಪಡೆಯಲು ಈ ಜೋಡಿಗಳು ಇಲಾಖೆಯ ಕಚೇರಿಗೆ ಅಲೆದಾಡುತ್ತಿವೆ.