ಲೋಕಸಭಾ ಚುನಾವಣೆ; ಚಾಮರಾಜನಗರ ಕ್ಷೇತ್ರದಿಂದ ಖರ್ಗೆ ಸ್ಪರ್ಧಿಸುವ ವಿಚಾರ ಪಕ್ಷದಲ್ಲಿ ಚರ್ಚೆಯಾಗಿಲ್ಲ: ಸಚಿವ ಮಹದೇವಪ್ಪ

ಹೊಸ ದಿಗಂತ ವರದಿ, ಮೈಸೂರು:

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ವಿಚಾರ ಪಕ್ಷದಲ್ಲಿ ಚರ್ಚೆಯಾಗಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಕಣಕ್ಕಿಳಿಸುವ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆಯೇ ಎನ್ನುವ ಪ್ರಶ್ನೆಗೆ ಅಂತೆ-ಕಂತೆಗಳಿಗೆ ಪ್ರತಿಕ್ರಿಯಿಸಲ್ಲ. ರಾಷ್ಟ್ರೀಯ ನಾಯಕರು ಸಂತೋಷಪಡುವ ವಿಚಾರವಲ್ಲವೇ? ಅವರು ಬಯಸಿದರೆ ಎಲ್ಲಿ ಬೇಕಾದರೂ ನಿಲ್ಲಬಹುದು. ಚಾಮರಾಜನಗರ ಮೀಸಲು ಕ್ಷೇತ್ರದಿಂದ ಖರ್ಗೆಯವರು ಸ್ಪರ್ಧಿಸಿದರೆ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದರು.

ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಯಾವುದೇ ಸೋಲು ನಾಯಕತ್ವ ನಿರ್ಧರಿಸಲ್ಲ.ಆಯಾಯ ಸಂದರ್ಭ,ಸನ್ನಿವೇಶದಲ್ಲಿ ಮತದಾರರು ನೀಡುವ ತೀರ್ಪನ್ನು ಸ್ವಾಗತಿಸಬೇಕು. ಮತದಾರರೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಭುಗಳು. ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪುಟಿದೇಳಲಿದೆ ಎಂದರು.

ಮೈಸೂರಿಗೆ ಐಐಟಿ ನೀಡಬೇಕೆಂಬ ಪ್ರಸ್ತಾಪವನ್ನು ಸಲ್ಲಿಸಲಾಗಿತ್ತು.ಆದರೆ,ಕೇಂದ್ರಸರ್ಕಾರ ಧಾರವಾಡಕ್ಕೆ ನೀಡಿತು. ಈಗಮತ್ತೆ ಮೈಸೂರಿಗೊಂದು ಐಐಟಿ ಮಂಜೂರು ಮಾಡಿದರೆ ಅಗತ್ಯವಿರುವ ಭೂಮಿ ಸೇರಿ ಮೂಲ ಸೌಕರ್ಯಗಳನ್ನು ಒದಗಿಸುತ್ತೇವೆ. ಮೈಸೂರಿಗೆ ಐಐಟಿ ಕೊಟ್ಟರೆ ಬೇಡ ಎನ್ನಲಾಗದು.ಸಂತೋಷದಿಂದ ಒಪ್ಪಿಕೊಂಡು ಮೂಲ ಸೌಕರ್ಯ ಒದಗಿಸಲು ಸರ್ಕಾರ ಗಮನಹರಿಸಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!