ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಸ್ಪಂದಿಸಿದ ಕರ್ನಾಟಕ ಸರ್ಕಾರ, 5 ಸಾವಿರ ರೂಪಾಯಿ ವೇತನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ.
ಅತಿಥಿ ಉಪನ್ಯಾಸಕರ ಪ್ರತಿಭಟನೆ ಸಂಬಂಧ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ , ಅತಿಥಿ ಉಪನ್ಯಾಸಕರ ವೇತನ 5 ಸಾವಿರ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಅತಿಥಿ ಉಪನ್ಯಾಸಕರು ಮುಷ್ಕರವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಆಲಿಸಿದ್ದೇವೆ. ಕೆಲವು ಬೇಡಿಕೆಗಳನ್ನೂ ನಮ್ಮ ಮುಂದೆ ಇಟ್ಟಿದ್ದರು. ವರ್ಕ್‌ಲೋಡ್ ಬಗ್ಗೆ ಸೂಚನೆ ನೀಡಲಾಗಿದೆ. 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರು ಕೆಲಸ ಬಿಡುವಾಗ 5 ಲಕ್ಷ ನೀಡಲು ತೀರ್ಮಾನ ಮಾಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.