ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮ ಮಂದಿರದ ಕನಸು ನನಸಾಗಿದೆ. ಮುಂದಿನ ಗುರಿ ರಾಮರಾಜ್ಯ ನಿರ್ಮಾಣ. ರಾಜ್ಯ ರಾಜ್ಯ ನಿರ್ಮಾಣಕ್ಕಾಗಿ ಸಾಮರ್ಥ್ಯ ಇದ್ದವರು ರಾಮದೇವರ ಹೆಸರಿನಲ್ಲಿ ಸೇವೆಗೆ ಮುಂದಾಗಬೇಕು. ಇದಕ್ಕಾಗಿ ರಾಮರಾಜ್ಯ ಸಮಿತಿ ರಚಿಸಲಾಗುವುದು ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಯಾವುದೇ ಪ್ರತ್ಯೇಕ ಸೇವೆ ಇರುವುದಿಲ್ಲ. ರಾಮಭಕ್ತಿ ಹಾಗೂ ದೇಶಭಕ್ತಿ ಬೇರೆಯಲ್ಲ. ದುರ್ಬಲರಿಗೆ ರಾಮನ ಹೆಸರಿನಲ್ಲಿ ಸೇವೆ ಸಲ್ಲಿಸಬೇಕಿದೆ. ಮನೆ ಇಲ್ಲದವರಿಗೆ ಮನೆ ನಿರ್ಮಾಣದ ಮೂಲ ನೆರವು ನೀಡಬೇಕು. ಈ ಕಾರ್ಯ ಉಡುಪಿಯಲ್ಲಿ ಈಗಾಗಲೇ ಆರಂಭಗೊಂಡಿದೆ. ಮುಂದಕ್ಕೆ ರಾಮರಾಜ್ಯ ಸಮಿತಿ ರಚಿಸಿ ಅದನ್ನು ದೇಶಾದ್ಯಂತ ವಿಸ್ತರಿಸಲಾಗುವುದು. ಈ ಸಮಿತಿ ಯಾವುದೇ ದೇಣಿಗೆ ಪಡೆಯುವುದಿಲ್ಲ. ಆರ್ಥಿಕವಾಗಿ ಅಶಕ್ತರಾಗಿರುವವರಿಗೆ ಮನೆ ನಿರ್ಮಾಣ ಸೇರಿದಂತೆ ಯಾವುದೇ ರೀತಿಯ ಸಹಾಯ ಮಾಡಲು ಅವಕಾಶ ಇದೆ. ಅದನ್ನು ಅವರವರ ಆರ್ಥಿಕ ಶಕ್ತಿಗೆ ಅನುಸಾರ ಅವರೇ ಫಲಾನುಭವಿಗಳ ಆಯ್ಕೆ ಮಾಡಿಕೊಂಡು ನೆರವು ನೀಡಬೇಕು. ಇದರಲ್ಲಿ ಸಮಿತಿಯ ಹಸ್ತಕ್ಷೇಪ ಇರುವುದಿಲ್ಲ. ರಾಮನ ದರ್ಶನ ಮಾಡುವಾಗ ತನ್ನ ಸೇವೆ ರಾಮನಿಗೆ ಅರ್ಪಿತ ಎಂದು ಪ್ರಾರ್ಥಿಸಿ ಎಂದರು.
ಲೋಕಾರ್ಪಣೆಗೆ ಸಿದ್ಧವಾಗಿದೆ
ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಈ ಕುರಿತಾದ ಕುಹಕ ಮಾತಿಗೆ ಮನ್ನಣೆ ಇಲ್ಲ. ರಾಮ ಮಂದಿರವನ್ನು ಎರಡೂವರೆ ವರ್ಷದಲ್ಲಿ ನಿರ್ಮಾಣ ಮಾಡುವ ಬಗ್ಗೆ ಎಲ್ ಆಂಡ್ ಟಿ ಹಾಗೂ ಟಾಟಾ ಕಂಪನಿ ಜತೆ ಮಾತುಕತೆ ನಡೆಸಲಾಗಿತ್ತು. ಆಗ ಅಯೋಧ್ಯೆ ಮಣ್ಣಿನ ಧಾರಣಾ ಸಾಮರ್ಥ್ಯದ ಪರೀಕ್ಷೆ ನಡೆದಿರಲಿಲ್ಲ. ಅಲ್ಲಿ ಧೂಳು, ಮರಳು ಪ್ರದೇಶವಾಗಿದ್ದು, ಸುಮಾರು ೫೦ ಅಡಿ ಆಳಕ್ಕೆ ಬಲವಾದ ವೇದಿಕೆ ನಿರ್ಮಿಸಿ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಹಾಗಾಗಿ ಮಂದಿರ ನಿರ್ಮಾಣಕ್ಕೆ ಮೂರು ವರ್ಷ ಬೇಕಾಯಿತು. ಪೂರ್ಣ ಕಾಮಗಾರಿ ಆಗದಿದ್ದರೂ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದರು.
ಜ.22ರಂದು ರಾಮಮಂದಿರ ಲೋಕಾರ್ಪಣೆಗೊಂಡ ಬಳಿಕ ಮರುದಿನದಂದಲೇ ಎಲ್ಲ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ. ಶ್ರೀ ರಾಮನ ದರುಶನಕ್ಕೆ ನಾಲ್ಕು ಸರತಿ ಸಾಲು ಇರುತ್ತದೆ. ರಾಮ ಮಂದಿರ ಬೆಳಗ್ಗೆ ೭ರಿಂದ ಮಧ್ಯಾಹ್ನ 12, ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೆ ಭಕ್ತರ ಪ್ರವೇಶಕ್ಕೆ ತೆರೆದಿರುತ್ತದೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದೆ. ಸಕ್ಕರೆ ಮಿಠಾಯಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು. ರಾಮ ಮಂದಿರದ ಪೂಜೆ ಹಿಂದಿನಂತೆ ರಾಮಾನಂದ ಸಂಪ್ರದಾಯ ಪ್ರಕಾರ ನಡೆಯಲಿದೆ ಎಂದರು.
ಕಾಮಾಲೆ ಕಣ್ಣಿಗೆ ಎಲ್ಲ ಕಡೆ ಹಳದಿ ಎಂಬಂತೆ ವರ್ತಿಸುವುದು ಸರಿಯಲ್ಲ
ಅಯೋಧ್ಯೆ ಮಂದಿರದ ಲೋಕಾರ್ಪಣೆಗೆ ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ. ಪ್ರತಿಪಕ್ಷಗಳು ಹಾಗೂ ಎಡಪಕ್ಷಗಳು ಆಹ್ವಾನವನ್ನು ತಿರಸ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಆಹ್ವಾನ ನೀಡದಿದ್ದರೆ ಅದನ್ನೇ ಪ್ರಶ್ನೆ ಮಾಡುತ್ತಾರೆ, ಆಹ್ವಾನ ನೀಡಿದರೆ ಅಲ್ಲೂ ತಿರಸ್ಕರಿಸಿ ಮಾತನಾಡುತ್ತಾರೆ. ಕಾಮಾಲೆ ಕಣ್ಣಿಗೆ ಎಲ್ಲ ಕಡೆ ಹಳದಿ ಎಂಬಂತೆ ವರ್ತಿಸುವುದು ಸರಿಯಲ್ಲ ಎಂದರು.
ಆಹ್ವಾನ ನೀಡಿಕೆಯಲ್ಲಿ ತಾರತಮ್ಯ ಎಸಗಿಲ್ಲ. ಅಲ್ಲಿ ಲೋಕಾರ್ಪಣೆ ದಿನ ಕೇವಲ 7 ಸಾವಿರ ಮಂದಿಗೆ ಕುಳಿತುಕೊಳ್ಳಲು ಅವಕಾಶ ಇದೆ. ಹಾಗಾಗಿ ಎಲ್ಲರನ್ನೂ ಆಹ್ವಾನಿಸಲು ಸಾಧ್ಯವಾಗದು. ಅಲ್ಲಿನ ಪರಿಸ್ಥಿತಿಯನ್ನು ಅರಿತುಕೊಂಡು ಸಂಯಮದಿಂದ ವರ್ತಿಸಬೇಕು. ಇಂತಹ ಕಾರ್ಯಗಳು ನಡೆಯುವಾಗ ಟೀಕೆ, ಟಿಪ್ಪಣಿಗಳು ಸಹಜ. ಅದನ್ನು ಉತ್ತಮ ಮನಸ್ಸಿನಿಂದ ನೋಡಬೇಕು ಎಂದರು.
ಕಲ್ಕಡ್ಕ ಅವರ ಹೇಳಿಕೆ ವೈಯಕ್ತಿಕವಾಗಿದ್ದು, ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ
ಆರ್‌ಎಸ್‌ಎಸ್ ಪ್ರಮುಖರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಅವರ ಬಂಧನಕ್ಕೆ ಆಗ್ರಹ ವ್ಯಕ್ತವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಶ್ರೀಗಳು, ಈ ವಿಚಾರದಲ್ಲಿ ಸರ್ಕಾರದ ತಾರತಮ್ಯ ನೀತಿಗೆ ಬೇಸರ ವ್ಯಕ್ತಪಡಿಸುತ್ತೇನೆ. ತಪ್ಪಾಗಲೇ ಬಾರದು, ತಪ್ಪಾಗದೇ ಇರುವುದನ್ನು ತಪ್ಪು ಎಂದು ಬಿಂಬಿಸುವುದು ಸರಿಯಲ್ಲ. ಅವರು ಮಾಡಿದರೆ ತಪ್ಪು ಬೇರೆಯವರು ಮಾಡಿದರೆ ಅದು ತಪ್ಪಲ್ಲ ಎಂಬ ನೀತಿ ಸರಿಯಲ್ಲ. ಕಲ್ಕಡ್ಕ ಅವರ ಹೇಳಿಕೆ ವೈಯಕ್ತಿಕವಾಗಿದ್ದು, ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು.