ಹೊಸ ದಿಗಂತ ವರದಿ, ಮಂಗಳೂರು:
ಅತ್ತ ಮುಸ್ಲಿಮ್ ಮಹಿಳೆ ಪಾದಯಾತ್ರೆಯಲ್ಲಿ ಅಯೋಧ್ಯೆಗೆ ಆಗಮಿಸುತ್ತಿರುವ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಗಾಲಿ ಕುರ್ಚಿಯಲ್ಲಿ ಅಯೋಧ್ಯೆಗೆ ತರಳುತ್ತಿರುವ ಶ್ರೀರಾಮನ ಭಕ್ತರೋರ್ವರು ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಕಾಣಸಿಕ್ಕಿದ್ದಾರೆ.
ಬೆಳಗಾವಿ ಜಿಲ್ಲೆ ಸವದತ್ತಿ ಮೂಲದ ನಿವಾಸಿ ಮಂಜುನಾಥ್ ಶ್ರೀರಾಮನ ಭಕ್ತ. ಎರಡು ಕಾಲು ನೋವು ಇದ್ದರೂ ಪ್ರಭುವಿನ ಮಂದಿರವನ್ನು ಕಣ್ತುಂಬಿಕೊಳ್ಳಬೇಕು ಎಂಬ ಕಾತರ ಇವರದ್ದು. ಹೀಗಾಗಿ ಗಾಲಿ ಕುರ್ಚಿಯಲ್ಲಿಯೇ ಅವರು ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಸಹಿತ ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಾ ತೆರಳುತಿರುವ ಇವರು ಈಗ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಾರಿಯುದ್ದಕ್ಕೂ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇನೆ.
ಮಠ ಮಂದಿರದಲ್ಲಿ ತಂಗುತ್ತೇನೆ. ಊಟ-ಉಪಹಾರ ಎಲ್ಲವೂ ಉಚಿತವಾಗಿಯೇ ಆಗುತ್ತದೆ. ಸಂತ ರವಿದಾಸರು ನನ್ನೊಳಗೆ ಅಂತರ್ಗತರು. ರಾಮ, ಹನುಮನ ಧ್ವಜದ ರಕ್ಷೆಯೊಂದಿಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಮುಂದಿನ ಒಂದೆರಡು ತಿಂಗಳಲ್ಲಿ ಅಯೋಧ್ಯೆ ತಲುಪುವ ಲೆಕ್ಕಾಚಾರ ಅವರದ್ದು.