ಹೊಸ ದಿಗಂತ ವರದಿ, ಮಡಿಕೇರಿ:
ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಪೊನ್ನಂಪೇಟೆ ಸಮೀಪದ ಬರಪೊಳೆಯ ಆರ್ಜಿಗುಂಡಿಯಲ್ಲಿ ಶನಿವಾರ ನಡೆದಿದೆ.
ಮೃತರನ್ನು ಪೊನ್ನಂಪೇಟೆ ಸಿಐಟಿ ಕಾಲೇಜಿನ ವಿದ್ಯಾರ್ಥಿಗಳಾದ ಎಂ.ಪಿ. ಆಕಾಶ್ ಬಿದ್ದಪ್ಪ, ಯು.ಸುದೇಶ್ ಅಯ್ಯಪ್ಪ ಹಾಗೂ ಕೆ.ಜೆ. ರಶಿಕ್ ಎಂದು ಗುರುತಿಸಲಾಗಿದೆ.
ಕಾಲೇಜಿನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ, ಕೇರಳಕ್ಕೆ ಹರಿಯುವ ಬರಪೊಳೆ ನದಿಯಲ್ಲಿ ಈ ಘಟನೆ ನಡೆದಿದೆ.
ನಾಲ್ವರು ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡಲೆಂದು ಹೊಳೆ ಬದಿಗೆ ತೆರಳಿದ್ದು, ಈ ಸಂದರ್ಭ ಆಕಸ್ಮಿಕವಾಗಿ ಒಬ್ಬರು ಕಾಲು ಜಾರಿದ್ದರಿಂದ ಇನ್ನಿಬ್ಬರು ಸಹಾಯ ಮಾಡಲು ಹೋಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಪೊನ್ನಂಪೇಟೆ ಪೊಲೀಸರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ತೆರಳಿ ಮೃತ ದೇಹಗಳನ್ನು ಹೊರ ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡರಲ್ಲದೆ, ಶವಗಳ ಗುರುತು ಪತ್ತೆ ಮಾಡಿ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು.
ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.