ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷವನ್ನು (New Year)ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಮಂದಿ ಸಜ್ಜಾಗಿದ್ದಾರೆ. ಹೊಸವರ್ಷಾಚರಣೆ ಹಿನ್ನೆಲೆ ನಗರದ ಹಲವೆಡೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು ಡಿಜೆ ಪಾರ್ಟಿ ಸೇರಿದಂತೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಲು ಎಲ್ಲಾ ರೀತಿಯ ತಯಾರಿ ನಡೆದಿದೆ.
ಈ ವೇಳೆ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಮತ್ತೊಂದೆಡೆ ತಡರಾತ್ರಿ 2 ಗಂಟೆವರೆಗೆ ನಮ್ಮ ಮೆಟ್ರೋ (Namma Metro) ಸಂಚರಿಸಲಿದೆ. ಸದ್ಯ ಈಗ ಪ್ರಯಾಣಿಕರ ಅನುಕೂಲಕ್ಕೆಂದು ಡಿ.31ರ ಮಧ್ಯರಾತ್ರಿ 2 ಗಂಟೆವರೆಗೂ ಬಿಎಂಟಿಸಿ (BMTC) ಬಸ್‌ಗಳ ಸಂಚಾರ ಸೇವೆ ಇರಲಿದೆ.
ಹೊಸ ವರ್ಷಾಚರಣೆ ಹಿನ್ನಲೆ ಬಿಎಂಟಿಸಿ ಬಸ್ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದೆ. ಇಂದು ಮಧ್ಯರಾತ್ರಿ 2 ಗಂಟೆಯವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರವಿರಲಿದೆ. ಜೊತೆಗೆ ಹೊಸ ವರ್ಷಾಚರಣೆಗೆ ಬರುವ ಸಾರ್ವಜನಿಕರಿಗಾಗಿ ಹೆಚ್ಚುವರಿ ಬಸ್‌ಗಳ ನಿಯೋಜನೆ ಮಾಡಲಾಗಿದೆ. ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗೆ ಹೊಸ ವರ್ಷಾಚರಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಹೀಗಾಗಿ ಆ ಮಾರ್ಗದಲ್ಲಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ಬಿಎಂಟಿಸಿ ಬಸ್ ಸಂಚಾರಕ್ಕೆ ನಿಗಮದಿಂದ ಸಿದ್ಧತೆ ನಡೆದಿದೆ.
ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಿಂದ ನಗರದ ಹಲವೆಡೆ ಬಸ್ ವ್ಯವಸ್ಥೆ ಮಾಡಲಾಗಿದೆ. ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಿಂದ ಕಾಡುಗೋಡಿ, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ಬನ್ನೇರುಘಟ್ಟ, ಕೆಂಗೇರಿ, ನೆಲಮಂಗಲ, ಮಾಗಡಿ ರಸ್ತೆ, ಹೆಣ್ಣೂರು ಸೇರಿದಂತೆ ಹಲವು ಏರಿಯಾಗಳಿಗೆ ಬಿಎಂಟಿಸಿ ಬಸ್ ವ್ಯವಸ್ಥೆ ಇರಲಿದೆ. ಜನದಟ್ಟಣೆ ಹೆಚ್ಚಾಗಿರುವ ಯಲಹಂಕ, ಇಂದಿರಾನಗರ, ಕೋರಮಂಗಲ, ಬನಶಂಕರಿ, ಶಾಂತಿನಗರ, ಗೊರಗುಂಟೆ ಪಾಳ್ಯ ಸುತ್ತಮುತ್ತ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಕಾರ್ಯಾಚರಣೆ ನಡೆಸಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.