ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆದ್ದಾರಿಗಳಲ್ಲಿ ಆವರಿಸಿಕೊಳ್ಳುವ ದಟ್ಟ ಮಂಜಿನಿಂದಾಗಿ ವಾಹನ ಚಾಲಕರುಗಳಿಗೆ ಸಂಕಷ್ಟದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಗಮ ಸಂಚಾರ ಹಾಗೂ ಸುರಕ್ಷತೆಗೆ ಸಂಬಂಧಿಸಿ ಮಾರ್ಗಸೂಚಿ ಪ್ರಕಟಿಸಿದೆ.
ಹೆದ್ದಾರಿಯ ವಾತಾವರಣ ವಾಹನ ಸಂಚಾರಕ್ಕೆ ಅನುಕೂಲಕರವಾಗಿದೆಯೇ ಎಂಬ ಬಗ್ಗೆ ಪ್ರತಿ ವಾರವೂ ರಾತ್ರಿ ವೇಳೆ ತಪಾಸಣೆ ನಡೆಸಬೇಕು. ಇದಕ್ಕಾಗಿ ಪ್ರಾಧಿಕಾರದ ಅಧಿಕಾರಿಗಳು, ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರನ್ನು ಒಳಗೊಂಡ ತಂಡ ರಚಿಸಬೇಕು ಎಂದು ಮಾರ್ಗಸೂಚಿ ತಿಳಿಸಿದೆ. ಜೊತೆಗೆ ಸುರಕ್ಷತಾ ಕ್ರಮ ಅಗತ್ಯವಿರುವ ಸ್ಥಳ ಗುರುತಿಸುವುದು ಈ ತಂಡದ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ತ್ವರಿತ ಕ್ರಮಕೈಗೊಳ್ಳುವಂತೆ ಪ್ರಾಧಿಕಾರದ ಕ್ಷೇತ್ರಮಟ್ಟದ ಅಧಿಕಾರಿಗಳಿಗೆ ಮಾರ್ಗಸೂಚಿಯಲ್ಲಿ ನಿರ್ದೇಶಿಸಲಾಗಿದೆ.
ಇದಲ್ಲದೆ ಮಂಜು ಆವೃತವಾದ ವೇಳೆ ಎದುರಾಗುವ ಸಮಸ್ಯೆಗಳನ್ನು ತಾಂತ್ರಿಕ ಹಾಗೂ ಸಂಚಾರ ಸುರಕ್ಷತಾ ವಿಧಾನದಡಿ ಬಗೆಹರಿಸಲು ಕ್ರಮಕೈಗೊಳ್ಳುವುದಾಗಿ ಪ್ರಾಧಿಕಾರ ತಿಳಿಸಿದೆ. ಹೆದ್ದಾರಿಗಳಲ್ಲಿ ಮಿನುಗುದೀಪ ಅಳವಡಿಸುವ ಮೂಲಕ ಬಳಕೆದಾರರಲ್ಲಿ ಸಂಚಾರ ನಿಯಮಗಳ ಪಾಲನೆಗೆ ಜಾಗೃತಿ ಮೂಡಿಸುವುದಾಗಿ ಪ್ರಾಧಿಕಾರ ಹೇಳಿದೆ.