ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ (Siddaramaiah) ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೂರು ದಶಕಗಳ ಬಳಿಕ ಕರ್ನಾಟಕ ಸರ್ಕಾರ ರಾಮಜನ್ಮಭೂಮಿ ಹೋರಾಟದ ಪ್ರಕರಣಕ್ಕೆ ಮರುಜೀವ ನೀಡಲು ಮುಂದಾಗಿದೆ. 31 ವರ್ಷಗಳ ನಂತರ ಹುಬ್ಬಳ್ಳಿಯಲ್ಲಿ ಒಬ್ಬ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದು, ರಾಮಭಕ್ತರ ಬಂಧನ ಸರ್ಕಾರದ ಟಿಪ್ಪು ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳ ಕಗ್ಗೊಲೆ ಆಗಿದ್ದವು. ರಾಮಮಂದಿರ ನಿರ್ಮಾಣ ಚರಿತ್ರೆಯಲ್ಲಿ ದಾಖಲಾಗುವ ಐತಿಹಾಸಿಕ ಕ್ಷಣ. ನಾವು ಕರಸೇವೆ ಮಾಡಿದ್ದೇವೆ, ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕರಸೇವಕರನ್ನು ಭಯಭೀತಗೊಳಿಸಲು ಹೊರಟಿದೆ. 30 ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಕಾರ್ಯಕರ್ತರನ್ನು ಜೈಲಿಗಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ರಾಮಭಕ್ತರ ಮೇಲೆ ಕಾಂಗ್ರೆಸ್ ಸರ್ಕಾರ ಕೇಸ್ ಹಾಕಿದೆ ಎಂದರು.
ರಾಮಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ್ದೆ, ನನ್ನನ್ನು ಬಂಧಿಸುತ್ತೀರಾ? ಯಡಿಯೂರಪ್ಪ ಕೂಡ ರಾಮಜನ್ಮಭೂಮಿ ಹೋರಾಟಕ್ಕೆ ಹೋಗಿದ್ದರು. ರಾಮಭಕ್ತರ ಬಂಧನ ಸರ್ಕಾರದ ಟಿಪ್ಪು ಸಂಸ್ಕೃತಿಯನ್ನು ತೋರಿಸುತ್ತದೆ. 30 ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಮತ್ತೆ ಓಪನ್ ಮಾಡಿದ್ದಾರೆ. ಆ ಕೇಸ್ಗೆ ಮರುಜೀವ ನೀಡಿ ಎಂದು ಸರ್ಕಾರ ಸೂಚನೆ ನೀಡಿದೆಯಂತೆ. ಟಿಪ್ಪು ಸಂಸ್ಕೃತಿಯ ಆಡಳಿತ ಮರು ಸ್ಥಾಪನೆಗೆ ಸರ್ಕಾರ ಹೊರಟಿದೆ ಎಂದರು.
ಸಿದ್ದರಾಮಯ್ಯ ಅವರು ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್. ಕಾಂಗ್ರೆಸ್ ಸರ್ಕಾರ ಮತ್ತೆ ದ್ವೇಷದ ರಾಜಕಾರಣ ಶುರು ಮಾಡಿದೆ. ಕಾಂಗ್ರೆಸ್ನವರು ಮುಂದೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ರಾಮನ ಆರಾಧನೆ ಮಾಡುವುದಾದರೆ ರಾಮನ ಪೂಜೆ ಮಾಡಬೇಕಿತ್ತು. ರಾಮನ ಹೆಸರು ಹೇಳಿದರೆ ಕಾಂಗ್ರೆಸ್ನವರಿಗೆ ಭಯವಾಗುತ್ತದೆ. ರಾಜ್ಯದಲ್ಲಿ ರೈತರ ಕೊರಳಿಗೆ ಸಿದ್ದರಾಮಯ್ಯ ಸರ್ಕಾರ ಕುಣಿಕೆ ಹಾಕುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಕಾಣಿಕೆ ಮೇಲೆ ಕಾಣಿಕೆ ಕೊಡುತ್ತಿದ್ದಾರೆ. ಮತಕ್ಕಾಗಿ ರಾಜಕೀಯ ಮಾಡೋದು ಸಿಎಂ ರಕ್ತದ ಕಣದಲ್ಲಿ ಬಂದಿದೆ ಎಂದರು.