ಭಾರತದ ಅರ್ಥವ್ಯವಸ್ಥೆಯನ್ನು ‘ಧ್ವಂಸ’ ಮಾಡಬೇಕು: ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಾ.12ರ ವೇಳೆಗೆ ಭಾರತದ ಅರ್ಥವ್ಯವಸ್ಥೆಯನ್ನು ‘ಧ್ವಂಸ’ ಮಾಡಬೇಕು. ಭಾರತದ ಷೇರು ಖರೀದಿ ನಿಲ್ಲಿಸಿ, ಅಮೆರಿಕ ಷೇರುಗಳನ್ನು ಹೂಡಿಕೆದಾರರು ಖರೀದಿಸಿ, ಭಾರತೀಯ ಅರ್ಥವ್ಯವಸ್ಥೆಗೆ ಹೊಡೆತ ನೀಡಬೇಕು ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಕರೆ ನೀಡಿದ್ದಾನೆ.

1993ರ ಮಾರ್ಚ್‌ 12ರಂದು ಬಾಂಬೆ ಷೇರುಪೇಟೆ ಕಟ್ಟಡದ ಮೇಲೆ ಉಗ್ರರು ದಾಳಿ ಮಾಡಿದ್ದರು. ಆ ದಿನ ಆರ್ಥಿಕ ಸಮರಕ್ಕೆ ಕರೆ ನೀಡಿದ್ದಾನೆ.

ಈ ಕುರಿತು ಸಂದೇಶ ನೀಡಿರುವ ಪನ್ನು, ‘ಮಾರ್ಚ್‌ 12ರಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಯಾವ ವ್ಯವಹಾರವೂ ಇರದಂತೆ ಎಲ್ಲ ಅಂತಾರಾಷ್ಟ್ರೀಯ ಸಂಸ್ಥೆಗಳು ಅಮೆರಿಕನ್‌ ಷೇರು ಮಾರುಕಟ್ಟೆಗೆ ತಮ್ಮ ಹೂಡಿಕೆಗಳನ್ನು ವರ್ಗಗೊಳಿಸಬೇಕು. ಆ ದಿನದ ನಂತರ ಭಾರತೀಯ ಅರ್ಥವ್ಯವಸ್ಥೆಯ ಅಧಃಪತನ ಆರಂಭವಾಗಲಿದೆ‘ ಎಂದಿದ್ದಾನೆ.

ಪ್ರತಿಕ್ರಿಯೆ ನೀಡಿರುವ ಭಾರತೀಯ ಗುಪ್ತಚರ ಸಂಸ್ಥೆಯ ಅಧಿಕಾರಿಗಳು, ‘ನರೇಂದ್ರ ಮೋದಿಯನ್ನು ಅಯೋಧ್ಯೆಯಲ್ಲಿ ಗುರಿ ಮಾಡಿ ದಾಳಿ ಮಾಡಬೇಕು ಎಂದು ಪನ್ನು ನೀಡಿದ ಕರೆ ಹುಸಿಯಾದ ಬಳಿಕ ಹೊಸ ಅಭಿಯಾನ ಆರಂಭಿಸಿದ್ದಾನೆ. ಆತ ಅಮೆರಿಕ ಸಂಜಾತನಾಗಿರುವ ಕಾರಣ ಇಂಥ ಕರೆಗಳ ಮೂಲಕ ಅಮೆರಿಕ ಕಂಪನಿಗಳಿಂದ ಹಣ ಸಂಪಾದಿಸಲು ಹೊರಟಿದ್ದಾನೆ. ಈತನನ್ನು ಅಂತಾರಾಷ್ಟ್ರೀಯ ಸಂಸ್ಥೆಗಳೂ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಂರಕ್ಷಿಸುತ್ತಿವೆ. ಈತ ಜಾಗತಿಕ ಉಗ್ರನಾಗಿದ್ದು, ಶೀಘ್ರದಲ್ಲೇ ವಿಚಾರಣೆಯನ್ನು ಎದುರಿಸಲಿದ್ದಾನೆ’ ಎಂಬುದಾಗಿ ತಿಳಿಸಿದ್ದಾರೆ.

ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಹಲವು ಬಾರಿ ಭಾರತದ ಮೇಲೆ ಹುಸಿ ದಾಳಿಯ ಬೆದರಿಕೆ ಒಡ್ಡುತ್ತಿರುತ್ತಾನೆ. ಇತ್ತೀಚೆಗೆ ನರೇಂದ್ರ ಮೋದಿಯನ್ನು ಕೊಲ್ಲುವುದರಿಂದ ಹಿಡಿದು, ವಿಶ್ವಕಪ್‌, ನೂತನ ಸಂಸತ್‌ ಭವನ ಮುಂತಾದ ಸ್ಥಳಗಳಲ್ಲಿ ಐತಿಹಾಸಿಕ ದಿನಗಳಂದು ದಾಳಿ ಮಾಡಬೇಕೆಂದು ಕರೆ ನೀಡುತ್ತಿದ್ದಾನೆ. ಈತನನ್ನು ಭಾರತ ಸರ್ಕಾರ 2020ರಲ್ಲಿ ಒಂಟಿ ಉಗ್ರನೆಂದು ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here