ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿಯೂ ಜೆ.ಎನ್- 1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಅನಗತ್ಯವಾಗಿ ಆತಂಕ ಪಡದೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ ಮಾಡಿದ್ದಾರೆ.
ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಗೆ ಒಳಪಡುವ ವಿವಿಧ ಅಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜೊತೆ ನಡೆಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಹಾಗೂ ಪೂರ್ವ ಸಿದ್ದತೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಈ ಮಾಹಿತಿಗಳನ್ನು ಹಂಚಿಕೊಂಡರು.
-ರಾಜ್ಯಕ್ಕೆ 30 ಸಾವಿರ ಕೋವಿಡ್ ವ್ಯಾಕ್ಸಿನ್ ಬಂದಿದೆ. ಇದರ ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
– 60 ವರ್ಷ ವಯೋಮಾನದವರು ಹಾಗೂ ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು.
-ಜನದಟ್ಟಣೆ ಇರುವಲ್ಲಿ ಅಗತ್ಯ ಇರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು ಉತ್ತಮ. ಆದರೆ ಕಡ್ಡಾಯದ ಆದೇಶ ಇಲ್ಲ.
-ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಬೆಡ್‍ಗಳನ್ನು ಮೀಸಲಿಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
-ವೈದ್ಯಕೀಯ ಕಾಲೇಜಿನಲ್ಲಿ 18,141 ಹಾಸಿಗೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ 10 ಸಾವಿರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರುವ ಆಸ್ಪತ್ರಗಳಲ್ಲಿ 11,500 ಹಾಸಿಗೆಗಳು ಇವೆ.
-ಸಭೆಯಲ್ಲಿ 99 ಮೆಡಿಕಲ್ ಕಾಲೇಜುಗಳು, 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ದೇಶಕರ ಜೊತೆ ಚರ್ಚೆ ನಡೆಸಲಾಗಿದೆ.
ಕೋವಿಡ್‍ನಿಂದ ಸಾವಾಗಿಲ್ಲ:
ರಾಜ್ಯದಲ್ಲಿ ಇತ್ತೀಚೆಗೆ 10 ಮಂದಿ ಸಾವನ್ನಪ್ಪಿದ್ದರು. ಇದು ಕೋವಿಡ್ ಕಾರಣದಿಂದಾಗಿ ಮೃತಪಟ್ಟಿಲ್ಲ .ಅವರು ವಿವಿಧ ವ್ಯಾಧಿಗಳಿಂದ ಬಳಲುತ್ತಿದ್ದರು. ಹೀಗಾಗಿ ಸಾವನ್ನಪ್ಪಿದ್ದಾರೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.
ಮೃತಪಟ್ಟ 10 ಮಂದಿಯಲ್ಲಿ 9 ಮಂದಿ ಬೇರೆ ಬೇರೆ ಅಂದರೆ ಹೃದಯ ಸಂಬಂಧಿ, ಕಿಡ್ನಿ ಹೀಗೆ ಹಲವಾರ ಕಾಯಿಲೆಗಳಿಂದ ಬಳಲುತ್ತಿದ್ದರು. ಇವರ ಸಾವಿಗೂ ಕೋವಿಡ್‍ಗೂ ಸಂಬಂಧವೇ ಇಲ್ಲ ಎಂದು ಹೇಳಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ , ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ , ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.