ಕೆಲಸ ಮಾಡುವ ವೇಳೆ ನಿಮ್ಮಿಂದ ಏನೋ ಸಣ್ಣ ತಪ್ಪಾಗಿ ಬಾಸ್ ಬೈದ್ರೂ ಅಂತಿಟ್ಟುಕೊಳ್ಳಿ. ಅದಕ್ಕೆ ಸಂಪೂರ್ಣವಾಗಿ ನೀವೇ ಕಾರಣಕರ್ತರು ಅನ್ನೋದನ್ನು ಎಂದಾದ್ರೂ ಒಪ್ಪಿಕೊಂಡಿದ್ದೀರಾ?
ನಡೆದು ಹೋಗುವಾಗ ಅಡ್ಡ ಹೋದ ಬೆಕ್ಕು, ತಿಂಡಿಗೆ ಉಪ್ಪು ಜಾಸ್ತಿ ಹಾಕಿದ ಅಮ್ಮ, ಬಸ್ ಬೇಕಂತಲೇ ನಿಧಾನವಾಗಿ ಓಡಿಸಿದ ಡ್ರೈವರ್ ಇವರೆಲ್ಲರೂ ನಿಮ್ಮ ಬಾಸ್ ಬೈದಿದ್ದಕ್ಕೆ ಮೂಲ ಕಾರಣ ಅಲ್ವಾ?
ಲೇಟಾಗಿ ಬರದೇ ಇದ್ದಿದ್ರೆ ತಪ್ಪಾಗ್ತಾ ಇರಲಿಲ್ಲ, ತಿಂಡಿ ಚೆನ್ನಾಗಿದ್ದಿದ್ದರೆ ಮೂಡ್ ಚೆನ್ನಾಗಿ ಇರ‍್ತಾ ಇತ್ತು ಆಗ ತಪ್ಪಾಗ್ತಾ ಇರಲಿಲ್ಲ. ಹೀಗೆ ಒಂದಕ್ಕೊಂದು ಲಿಂಕ್ ಮಾಡ್ತಿರಿಯೇ ಹೊರತು ತಪ್ಪು ನಿಮ್ಮದು ಎಂದು ಒಪ್ಪಿಕೊಳ್ಳೋದಿಲ್ಲ.
ಒಲೆ ಮೇಲೆ ಹಾಲಿಟ್ಟು ಬಂದಿರೋದು ನೀವೇ ಆದ್ರೂ ಹಾಲು ಉಕ್ಕಿದಾಗ ಅದರ ಜವಾಬ್ದಾರಿ ನಿಮ್ಮದಲ್ಲ. ಎದುರಿಗೆ ಯಾರು ಕಾಣಿಸಿತ್ತಾರೋ ಅವರಿಗೆ ನೀನಾದ್ರೂ ಆಫ್ ಮಾಡಬಹುದಿತ್ತು, ಕಸ ಗುಡಿಸುತ್ತಿದ್ದೆ ಅದಕ್ಕೆ ನೆನಪಾಗಿಲ್ಲ. ಹೀಗೆ ನೆಪಗಳನ್ನು ಹೇಳೋದು ಸಾಮಾನ್ಯ.
ಇಂಥ ಸಣ್ಣ ಪುಟ್ಟ ಅಲ್ಲ, ಸಂಬಂಧಗಳನ್ನು ಹಾಳು ಮಾಡಿದ್ದು, ಮನಸ್ಸಿಗೆ ನೋವು ಮಾಡಿದ್ದಕ್ಕೂ ಜವಾಬ್ದಾರಿ ನಾವಲ್ಲ, ನಾನು ಮಾಡಿದ್ದೇ ಸರಿ ಎಂದು ನಿಮಗೆ ನೀವೇ ಸಮಾಧಾನಿಸಿಕೊಳ್ತೀರಿ.
ಜನ ತಮ್ಮ ತಪ್ಪಿಗೆ ಬೇರೆ ಅವರ ಮೇಲೆ ಗೂಬೆ ಕೂರಿಸೋದ್ಯಾಕೆ?
ಈ ರೀತಿ ಮಾಡೋದ್ರಿಂದ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲಾಗುತ್ತದೆ. ಆ ಕ್ಷಣಕ್ಕೆ ತಪ್ಪನ್ನು ಇನ್ನೊಬ್ಬರೆಡೆಗೆ ತೂರಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋದಷ್ಟೇ ಸದ್ಯದ ಗುರಿಯಾಗಿರುತ್ತದೆ. ಅಲ್ಲದೇ ಎಷ್ಟೋ ಜನರಿಗೆ ತಪ್ಪನ್ನು ಒಪ್ಪಿಕೊಳ್ಳೋದಕ್ಕೆ ಅಹಂ ಅಡ್ಡಿಯಾಗುತ್ತದೆ. ಇದೆಲ್ಲವೂ ಕಾಮನ್. ಕೆಲ ಸಮಯದ ನಂತರವೂ ನಿಮ್ಮದೇ ತಪ್ಪು ಎಂದು ತಿಳಿಯದೇ ಹೋದರೆ, ನೊಂದವರ ಬಳಿ ಕ್ಷಮೆ ಕೇಳದೇ ಹೋದರೆ ಅಲ್ಲಿ ನಿಮಗೇನೋ ಸಮಸ್ಯೆ ಇದೆ ಎಂದುಕೊಳ್ಳಬಹುದು.
ಎಲ್ಲವನ್ನೂ ಪರ್ಸನಲಿ ತೆಗೆದುಕೊಳ್ಳುವ ಅಥವಾ ತೆಗೆದುಕೊಳ್ಳದ, ತಪ್ಪುಗಳನ್ನು ಒಪ್ಪಿ ಕಲಿಯುವ ಅಥವಾ ತಪ್ಪನ್ನು ಒಪ್ಪದೇ ಇರುವ ಆಯ್ಕೆ ನಮ್ಮದೇ ಆಗಿರುತ್ತದೆ. ಹೇಳಿ ಇನ್ಮೇಲೆ ನಿಮ್ಮ ತಪ್ಪನ್ನು ಒಪ್ಪಿಕೊಂಡು ಮುನ್ನಡೆಯುತ್ತೀರಾ?