ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯಲ್ಲಿ ಮಗ ಪ್ರೀತಿಸಿ ಓಡಿಹೋಗಿದ್ದಕ್ಕೆ ತಾಯಿಯನ್ನು ಬೆತ್ತಲೆಗೊಳಿಸಿ ಥಳಿಸಿದ ಸುದ್ದಿ ಮಾಸುವ ಮುನ್ನವೇ ಇಂಥದ್ದೇ ಪ್ರಕರಣ ಮರುಕಳಿಸಿದೆ.
ಜಮೀನಿನಲ್ಲಿ ಪೈಪ್‌ಲೈನ್ ತೆರವು ವಿಚಾರದಲ್ಲಿ 20 ಜನರ ಗುಂಪು ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ.
ಬೈಲಹೊಂಗಲ ಗ್ರಾಮದ ಮಹಿಳೆ ತನ್ನ ಜಮೀನಿನಲ್ಲಿ ಹಾದುಹೋಗಿದ್ದ ಪೈಪ್ ಲೈನ್ ತೆರವು ಮಾಡುವಂತೆ ಗ್ರಾಪಂ ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಆದರೆ ಈ ಮನವಿಗೆ ಯಾರೂ ಬೆಲೆ ಕೊಟ್ಟಿರಲಿಲ್ಲ. ಮಹಿಳೆ ಒಂಟಿಯಾಗಿದ್ದಾರೆ ಎಂದು ತಿಳಿದ ನಂತರ ಆಕೆಯನ್ನು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ.
ಕಳೆದ 10 ದಿನದ ಹಿಂದೆ ಮಹಿಳೆ ಮತ್ತೆ ಈ ಬಗ್ಗೆ ಕೇಳಲು ಕಚೇರಿಗೆ ಹೋದಾಗ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಎದುರಾಗಿದೆ. ತಕ್ಷಣವೇ ಮಹಿಳೆ ದೂರು ನೀಡಲು ಠಾಣೆಗೆ ಹೋದರೆ ಅಲ್ಲಿಯೂ ದೂರು ಸ್ವೀಕರಿಸಿಲ್ಲ ಎನ್ನಲಾಗಿದೆ.
ಇದಕ್ಕಾಗಿ ಮಹಿಳೆ ಬೆಳಗಾವಿಯ ಎಸ್‌ಪಿ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.