ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮ ಜನ್ಮಭೂಮಿ ಹೋರಾಟದ ಸಂದರ್ಭ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದ ಪ್ರಕರಣಗಳಿಗೆ ಬರೋಬ್ಬರಿ 31 ವರ್ಷಗಳ ಬಳಿಕ ಮರುಜೀವ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
1992 ಡಿಸೆಂಬರ್ 5 ರಂದು ಅಯೋಧ್ಯೆ ಕರಸೇವೆಗೂ ಮುನ್ನ ಹುಬ್ಬಳ್ಳಿ ನಗರದಲ್ಲಿ ಗಲಭೆಯೊಂದು ನಡೆದಿತ್ತು. ಅಂದು ಅಲ್ಲಿನ ಮಳಿಗೆಗೆ ಬೆಂಕಿ ಹಚ್ಚಿದ್ದ ಘಟನೆಗೆ ಸಂಬಂಧಿಸಿ ಒಂಭತ್ತು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಶ್ರೀಕಾಂತ್ ಪೂಜಾರಿಯನ್ನೂ ಆರೋಪಿಯಾಗಿ ಹೆಸರಿಸಲಾಗಿದ್ದು, ಘಟನೆ ನಡೆದ 31 ವರ್ಷಗಳ ಬಳಿಕ ಪೊಲೀಸರು ಬಂಧಿಸಿರುವುದು ಭಾರೀ ಚರ್ಚೆ, ಆಕ್ಷೇಪಗಳಿಗೆ ಕಾರಣವಾಗಿದೆ.
ಬಂಧಿತ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೂಜಾರಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅತ್ತ ಅಯೋಧ್ಯಾ ಶ್ರೀರಾಮ ಮಂದಿರ ಲೋಕಾರ್ಪಣೆ ಸಂಭ್ರಮದಲ್ಲಿರುವಾಗಲೇ ಇತ್ತ ಕರಸೇವಕರನ್ನು ಕಾಡಲು ಆರಂಭಿಸಿರುವ ಆಡಳಿತದ ವಿರುದ್ಧ ಸಹಜವಾಗಿಯೇ ಜನಾಕ್ರೋಶವೂ ವ್ಯಕ್ತವಾಗುತ್ತಿದೆ.