Thursday, January 1, 2026

CINE | ಸದ್ದಿಲ್ಲದೆ ಮುಗಿಯಿತು ಶೂಟಿಂಗ್: 2026ರಲ್ಲಿ ಬಿಡುಗಡೆಯಾಗಲಿದೆ ‘ದಿ ಕೇರಳ ಸ್ಟೋರಿ’ ಮುಂದುವರಿದ ಭಾಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ, ವಿವಾದ ಮತ್ತು ಯಶಸ್ಸಿನ ನಡುವೆ ಸದ್ದು ಮಾಡಿದ್ದ ‘ದಿ ಕೇರಳ ಸ್ಟೋರಿ’ ಚಿತ್ರದ ಎರಡನೇ ಭಾಗ ಈಗ ಸದ್ದಿಲ್ಲದೆ ಸಿದ್ಧವಾಗಿದೆ. ಲವ್ ಜಿಹಾದ್‌ನಂತಹ ಸೂಕ್ಷ್ಮ ವಿಷಯವನ್ನು ಇಟ್ಟುಕೊಂಡು 2023ರಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದ ಈ ಚಿತ್ರದ ಸೀಕ್ವೆಲ್, ಈಗ ಬಿಡುಗಡೆಗೆ ಸಜ್ಜಾಗಿದೆ.

ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಈ ಬಾರಿ ಚಿತ್ರೀಕರಣದ ವಿಷಯದಲ್ಲಿ ಭಾರೀ ಎಚ್ಚರಿಕೆ ವಹಿಸಿದ್ದಾರೆ. ಕೇರಳದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆಟ್‌ನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿತ್ತು.

ಚಿತ್ರೀಕರಣದ ಸಮಯದಲ್ಲಿ ನಟರಿಗಾಗಲಿ ಅಥವಾ ತಾಂತ್ರಿಕ ವರ್ಗದವರಿಗಾಗಲಿ ಮೊಬೈಲ್ ಫೋನ್ ಬಳಸಲು ಅವಕಾಶವಿರಲಿಲ್ಲ.

ಚಿತ್ರದ ಯಾವುದೇ ದೃಶ್ಯ ಅಥವಾ ಮಾಹಿತಿ ಸೋರಿಕೆಯಾಗದಂತೆ ಶೂಟಿಂಗ್ ಸೆಟ್ ಅನ್ನು ಕಬ್ಬಿಣದ ಕವಚದಂತೆ ರಕ್ಷಿಸಲಾಗಿತ್ತು. ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿದ್ದ ಮೊದಲ ಭಾಗದ ನಂತರ, ಈ ಬಾರಿ ಯಾರಿದ್ದಾರೆ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ವರದಿಗಳ ಪ್ರಕಾರ, ‘ದಿ ಕೇರಳ ಸ್ಟೋರಿ 2’ ಮೊದಲ ಭಾಗಕ್ಕಿಂತಲೂ ಹೆಚ್ಚು ಕರಾಳ ಮತ್ತು ಗಂಭೀರ ವಾಸ್ತವಗಳನ್ನು ಒಳಗೊಂಡಿರಲಿದೆ. ಸಮಾಜದ ಮುಚ್ಚಿಟ್ಟ ಮುಖಗಳನ್ನು ಅನಾವರಣಗೊಳಿಸುವ ಪ್ರಯತ್ನ ಈ ಸಿನಿಮಾದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ವಿವಾದಗಳ ಹೊರತಾಗಿಯೂ ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು, ಹಾಗಾಗಿ ಎರಡನೇ ಭಾಗದ ಮೇಲೆ ನಿರೀಕ್ಷೆಗಳು ಮುಗಿಲ ಮುಟ್ಟಿವೆ.

ಎಲ್ಲಾ ಅಂದುಕೊಂಡಂತೆ ನಡೆದರೆ, ಈ ಬಹುನಿರೀಕ್ಷಿತ ಚಿತ್ರವು 2026ರ ಫೆಬ್ರವರಿ 27ರಂದು ಬೆಳ್ಳಿತೆರೆಯ ಮೇಲೆ ಅಪ್ಪಳಿಸಲಿದೆ.

error: Content is protected !!