Thursday, January 1, 2026

ರಷ್ಯಾದ ಆರ್ಥಿಕ ಬೆನ್ನೆಲುಬಿಗೆ ಉಕ್ರೇನ್ ಏಟು: ತೈಲ ಸಂಸ್ಕರಣಾಗಾರದಲ್ಲಿ ಅಗ್ನಿ ತಾಂಡವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತು ಹೊಸ ವರ್ಷ 2026ನ್ನು ಸಂಭ್ರಮದಿಂದ ಸ್ವಾಗತಿಸುತ್ತಿರುವ ನಡುವೆಯೇ, ರಷ್ಯಾ–ಉಕ್ರೇನ್ ಯುದ್ಧದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಡಿಸೆಂಬರ್ 31ರ ರಾತ್ರಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಗಳು ರಷ್ಯಾದ ಪ್ರಮುಖ ಇಂಧನ ಹಾಗೂ ಸೈನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿವೆ. ಈ ದಾಳಿಯಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳು ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗೆ ಗಂಭೀರ ಹಾನಿಯಾಗಿದೆ ಎಂದು ಉಕ್ರೇನ್ ಸೇನೆ ಹೇಳಿದೆ.

2026ರ ಮೊದಲ ದಿನವೇ ರಷ್ಯಾದ ಕ್ರಾಸ್ನೋಡರ್ ಪ್ರದೇಶದಲ್ಲಿರುವ ಇಲ್ಸ್ಕಿ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಇದು ಈ ವರ್ಷ ದಾಳಿಗೆ ಒಳಗಾದ ಮೊದಲ ರಷ್ಯಾದ ತೈಲ ಸಂಸ್ಕರಣಾಗಾರ ಎನ್ನಲಾಗುತ್ತಿದೆ. ದಾಳಿಯ ಬಳಿಕ ಆ ಪ್ರದೇಶದಲ್ಲಿ ದಟ್ಟ ಹೊಗೆ ಮತ್ತು ಅಗ್ನಿ ಜ್ವಾಲೆಗಳು ಆವರಿಸಿಕೊಂಡಿದ್ದು, ತುರ್ತು ಸೇವೆಗಳು ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ಇದೇ ವೇಳೆ, ರಷ್ಯಾದ ಪ್ರಮುಖ ಸಂಸ್ಕರಣಾಗಾರಗಳಲ್ಲಿ ಒಂದಾದ ಟುವಾಪ್ಸೆ ತೈಲ ಸಂಸ್ಕರಣಾಗಾರಕ್ಕೂ ಡ್ರೋನ್ ದಾಳಿ ನಡೆದಿದ್ದು, ಮುಖ್ಯ ಸಂಸ್ಕರಣಾ ಘಟಕಕ್ಕೆ ಹಾನಿಯಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಈ ಘಟಕ ರಷ್ಯಾ ಸೇನೆಗೆ ಇಂಧನ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕೇಂದ್ರವಾಗಿದ್ದು, ಈ ಹಿಂದೆಯೂ ಉಕ್ರೇನ್ ದಾಳಿಗೆ ಗುರಿಯಾಗಿತ್ತು.

ತಮನ್ ಪರ್ಯಾಯ ದ್ವೀಪದಲ್ಲಿರುವ ತಮನ್ನೆಫ್ಟೆಗಾಜ್ ತೈಲ ಟರ್ಮಿನಲ್ ಮೇಲೂ ದಾಳಿ ನಡೆದಿದೆ. ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹ ಹಾಗೂ ರಫ್ತಿಗೆ ಮಹತ್ವದ ಈ ಟರ್ಮಿನಲ್‌ನಲ್ಲಿ ಬಂದರು ಮೂಲಸೌಕರ್ಯ ಮತ್ತು ಎರಡು ಬರ್ತ್‌ಗಳು ಹಾನಿಗೊಂಡಿವೆ ಎಂದು ಉಕ್ರೇನ್ ವಿಶೇಷ ಪಡೆಗಳು ತಿಳಿಸಿವೆ.

ಇದರ ಜೊತೆಗೆ, ಮಾಸ್ಕೋದಿಂದ ಸುಮಾರು 260 ಕಿಲೋಮೀಟರ್ ದೂರದಲ್ಲಿರುವ ರೈಬಿನ್ಸ್ಕ್‌ನ ತಾತ್ಕಾಲಿಕ ತೈಲ ಡಿಪೋ ಕೂಡ ಡ್ರೋನ್ ದಾಳಿಗೆ ಒಳಗಾಗಿದೆ. ಇದು ರಷ್ಯಾದ ಕಾರ್ಯತಂತ್ರದ ಇಂಧನ ಸಂಗ್ರಹದ ಭಾಗವಾಗಿದ್ದು, ದಾಳಿಯ ನಂತರ ಅಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

error: Content is protected !!