‘#BoycottMaldives’ ಫುಲ್‌ ಟ್ರೆಂಡ್‌: ಈಗ ಲಕ್ಷದ್ವೀಪದತ್ತ ಭಾರತೀಯರ ಚಿತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪ (Lakshadweep) ಸಮುದ್ರತೀರಕ್ಕೆ ಭೇಟಿ ನೀಡಿದ್ದ ವಿರುದ್ಧ ಮಾಲ್ಡೀವ್ಸ್‌ ಸಚಿವ ಅವಹೇಳನಾಕಾರಿ ಮಾತನಾಡಿದ್ದು, ಇದಾದ ಬಳಿಕ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕೆಲವು ದಿನಗಳ ಬಳಿಕ ಮಾಲ್ಡೀವ್ಸ್‌ (Maldives) ಸಚಿವರೊಬ್ಬರು, ಭಾರತವು ಮಾಲ್ಡೀವ್ಸ್‌ ದೇಶವನ್ನು ಗುರಿಯಾಗಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್, ಭಾರತವು ಮಾಲ್ಡೀವ್ಸ್‌ ಅನ್ನು ಟಾರ್ಗೆಟ್ ಮಾಡುತ್ತಿದೆ. ಮಾಲ್ಡೀವ್ಸ್‌ನ ಬೀಚ್ ಪ್ರವಾಸೋದ್ಯಮದ (Maldives Beach Tourism) ಜೊತೆಗೆ ಸ್ಪರ್ಧಿಸಲು ಭಾರತಕ್ಕೆ ಸಾಕಷ್ಟು ಸವಾಲುಗಳಿವೆ. ಭಾರತದ ಬೀಚ್‌ಗಳು ಕೊಳಕಾಗಿವೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ.

ಅದಕ್ಕೆ ಉತ್ತರವಾಗಿ, ದೇಶದ ಕೇಂದ್ರಾಡಳಿತ ಪ್ರದೇಶಕ್ಕೆ ಮೋದಿ ಅವರು ಭೇಟಿ ನೀಡಿದ್ದಾಗ, ಅಲ್ಲಿನ ವಿಹಂಗಮ ಸಮುದ್ರ ತೀರದಲ್ಲಿ ಫೋಟೋ ಶೂಟ್‌ ಹಾಗೂ ವಿಡಿಯೋಗಳನ್ನು ತೆಗೆಸಿಕೊಂಡಿದ್ದರು. ಸ್ನಾರ್ಕ್ಲಿಂಗ್‌ ಮಾಡುವ ಜೊತೆಗೆ ದ್ವೀಪ ರಾಷ್ಟ್ರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದರು. ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಪ್ರವಾಸ ಇಷ್ಟಪಡುವ ಜನರು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಕರೆ ಕೊಟ್ಟಿದ್ದರು. ಈ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸಕ್ಕೆ ಪ್ಲ್ಯಾನ್‌ ಮಾಡಿದ್ದ ಬಹುತೇಕ ಭಾರತೀಯರು ತಮ್ಮ ಪ್ರವಾಸವನ್ನು ಸ್ಥಗಿತಗೊಳಿಸಿದ್ದು, ಲಕ್ಷದ್ವೀಪದತ್ತ ಚಿತ್ತ ಹರಿಸಿದ್ದಾರೆ. ಟ್ವಿಟ್ಟರ್‌ನಲ್ಲೂ ಇದರ ಅಲೆಗಳು ಜೋರಾಗಿವೆ.

ಮಾಲ್ಡೀವ್ಸ್‌ನ ಭಾರತ ವಿರೋಧಿ ನೀತಿ ಬಹಿರಂಗವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ತಮ್ಮ ನೆಚ್ಚಿನ ಪ್ರವಾಸಕ್ಕಾಗಿ ಮಾಲ್ಡೀವ್ಸ್‌ ತಾಣವನ್ನು ಆಯ್ಕೆ ಮಾಡಿಕೊಂಡಿದ್ದ ಹೆಚ್ಚಿನ ಭಾರತೀಯರು ಪ್ರವಾಸವನ್ನು ತಮ್ಮ ಪಟ್ಟಿಯಿಂದ ಕೈಬಿಟ್ಟು, ಲಕ್ಷದ್ವೀಪವನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ʻ#ಬಾಯ್ಕಾಟ್ ಮಾಲ್ಡೀವ್ಸ್ʼ ಎಂಬ ಹ್ಯಾಷ್‌ಟ್ಯಾಗ್ ಎಕ್ಸ್‌ ತಾಣದಲ್ಲಿ ಟ್ರೆಂಡ್ ಆಗಿದೆ.

ಅನೇಕರು ತಮ್ಮ ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ. ಪ್ರಯಾಣ ಹಾಗೂ ಹೋಟೆಲ್ ಬುಕಿಂಗ್ ರದ್ದುಗೊಳಿಸಿರುವ ಮಾಹಿತಿಯ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!