ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರೈತರು ಈ ಸರಕಾರದ ರೈತವಿರೋಧಿ ಧೋರಣೆ ಬಗ್ಗೆ ಒಂದು ಸ್ಪಷ್ಟ ಅಭಿಪ್ರಾಯಕ್ಕೆ ಬರುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ರೈತ ಮೋರ್ಚಾ ನಿಕಟಪೂರ್ವ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಸರಕಾರದ ಮೂಗು ಹಿಡಿದು, ಕಿವಿ ಹಿಂಡಿ, ಸೊಂಟವನ್ನು ನೆಟ್ಟಗೆ ಮಾಡಿ, ರೈತಪರ ಗಟ್ಟಿ ತೀರ್ಮಾನಕ್ಕಾಗಿ ನಾವೆಲ್ಲ ಹೋರಾಟ ಮಾಡಬೇಕು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಎಲ್ಲರಲ್ಲಿ ಉತ್ಸಾಹ ನೂರು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಹಾಲು ಉತ್ಪಾದಕರಿಗೆ ಕೊಡುವಬೆಂಬಲ ಬೆಲೆಯನ್ನು 6 ತಿಂಗಳಿನಿಂದ ಕೊಟ್ಟಿಲ್ಲ. ಇಂಥ ನೂರಾರು ರೈತವಿರೋಧಿ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮಾಡಬೇಕಿದೆ ಎಂದ ಅವರು, ಈರಣ್ಣ ಕಡಾಡಿ ಅವರ ತಂಡವು ಕ್ರಿಯಾಶೀಲವಾಗಿ ಕೆಲಸ ಮಾಡಿದೆ. ಎ.ಎಸ್. ಪಾಟೀಲ್ ನಡಹಳ್ಳಿ ಅವರು ನೂತನ ಅಧ್ಯಕ್ಷರಾಗಿದ್ದಾರೆ. ನಡಹಳ್ಳಿ ಅವರ ನೇತೃತ್ವದಲ್ಲಿ ರೈತರಿಗೆ ಅಭಯ ನೀಡುವ ಕಾರ್ಯ ಆಗಲಿದೆ ಎಂದು ವಿಶ್ವಾಸದಿಂದ ನುಡಿದರು.
ರೈತರು ಬೀದಿಗೆ ಬರುವ ಭಯ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಕಾಡುತ್ತಿದೆ. ಅದು ರೈತರ ಕುತ್ತಿಗೆಗೆ ನೇಣು ಹಾಕುವ ತೀರ್ಮಾನ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಹುಚ್ಚರಾಯ ದೇವಸ್ಥಾನದಿಂದ ವಿಧಾನಸೌಧಕ್ಕೆ ರೈತರ ಪರ ಪಾದಯಾತ್ರೆ ಮಾಡಿದ್ದ ಯಡಿಯೂರಪ್ಪ ಅವರು ನೈಜ ರೈತಪರ ನಾಯಕರು. ಕೈಗೊಂದು ಬ್ಯಾಗ್, ಬಟ್ಟೆ ತೆಗೆದುಕೊಳ್ಳಲು ಅವರು ಹತ್ತಿರದಲ್ಲೇ ಇದ್ದ ಮನೆಗೆ ಹೋಗಿ ಬಂದವರಲ್ಲ. ಬುತ್ತಿ ಕಟ್ಟಿಕೊಂಡು, ರೊಟ್ಟಿ ಕಟ್ಟಿಕೊಂಡು ಯಡಿಯೂರಪ್ಪನವರನ್ನು ಜನರು ಕಾಯುತ್ತಿದ್ದರು ಎಂದು ಚಪ್ಪಾಳೆಗಳ ನಡುವೆ ನೆನಪಿಸಿದರು.
ವಿಧಾನಸೌಧದಲ್ಲಿ ಯಡಿಯೂರಪ್ಪನವರು ಏಕಾಂಗಿಯಾಗಿ ಹೋರಾಟ ಮಾಡಿದ್ದರು. ಅವತ್ತು ಸರಕಾರ ತನ್ನ ರೈತವಿರೋಧಿ ನಿರ್ಧಾರವನ್ನು ಹಿಂಪಡೆಯಿತು. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಬಿರುದು ಬಂತು ಎಂದು ವಿವರಿಸಿದರು.
ಹಸಿರು ಶಾಲು ಹಾಕಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪ ಅವರು, ಬಳಿಕ ರೈತರಿಗಾಗಿ ಪ್ರತ್ಯೇಕ ಬಜೆಟ್ ಕೊಟ್ಟ ಮೊದಲ ಸಿಎಂ ಎಂದು ತಿಳಿಸಿದರು. ಬಡ್ಡಿ ಇಲ್ಲದೆ ಸಾಲ ನೀಡಿದ ಸಿಎಂ ಯಡಿಯೂರಪ್ಪನವರು ಎಂದರು. 10 ಎಚ್ಪಿವರೆಗೆ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದರು; ಕೃಷಿ ಸಮ್ಮಾನ್ ಯೋಜನೆಗೆ ಪೂರಕವಾಗಿ 4 ಸಾವಿರ ನೀಡಿದ ಸಿಎಂ ಯಡಿಯೂರಪ್ಪನವರು. ರೈತರ ಪರವಾಗಿ, ಮಹಿಳೆಯರ ಪರವಾಗಿ, ಕಾರ್ಮಿಕರ ಪರವಾಗಿ ಬಿಜೆಪಿ ನಿಲುವು ಸದಾ ಇರುತ್ತದೆ. ನಮ್ಮ ನಾಯಕರಲ್ಲಿ ಆ ಬದ್ಧತೆ ಸದಾ ಇದೆ ಎಂದು ತಿಳಿಸಿದರು.
3,500 ಕೋಟಿ ಕಿತ್ತುಕೊಂಡರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರದಲ್ಲಿ ರೈತರಿಗಾಗಿ 7,500 ಕೋಟಿ ರೂಪಾಯಿ ಇಟ್ಟಿದ್ದೆವು. ಜುಲೈನಲ್ಲಿ ಕಾಂಗ್ರೆಸ್ ಸರಕಾರ ಬಜೆಟ್ ಮಂಡಿಸಿದಾಗ ಅದನ್ನು 4 ಸಾವಿರ ಕೋಟಿಗೆ ಇಳಿಸಿತು. ರೈತರಿಗೆ ಸಿಗಬೇಕಾದ 3,500 ಕೋಟಿಯನ್ನು ಕಿತ್ತುಕೊಂಡರು ಎಂದು ಪಿ.ರಾಜೀವ್ ಅವರು ತೀವ್ರವಾಗಿ ಆಕ್ಷೇಪಿಸಿದರು.
ಪಂಪ್ಸೆಟ್ಗೆ ಕನೆಕ್ಷನ್ ಕೆಲಸ ಉಚಿತವಾಗಿ ಆಗುತ್ತಿತ್ತು. ಈಗ ಒಬ್ಬ ರೈತ ಟಿಸಿ ಸಂಬಂಧಿತ ಖರ್ಚು ಸೇರಿ 2.5 ಲಕ್ಷ ಖರ್ಚು ಮಾಡಿ ವಿದ್ಯುತ್ ಕನೆಕ್ಷನ್ ಪಡೆಯಬೇಕಿದೆ ಎಂದು ತಿಳಿಸಿದರು.
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ, ರೈತ ಮೋರ್ಚಾ ನಿಕಟಪೂರ್ವ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತಿತರರು ಭಾಗವಹಿಸಿದ್ದರು.