ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಸಮಯದಲ್ಲಿ ಕರ್ನಾಟಕದ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಮಂಗಳಾರತಿಯನ್ನು ನಡೆಸಲು ಸೂತ್ತೋಲೆ ಹೊರಡಿಸಲಾಗಿದೆ.
ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ದಿನಾಂಕ 22/01/2024ರಂದು ಅಯೋಧ್ಯೆಯಲ್ಲಿ ನೂತನ ಶ್ರೀ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನ ಪಯುಕ್ತ ವಿಶೇಷ ಪೂಜೆ, ಪ್ರಾರ್ಥನೆ ನಡೆಸುವ ಬಗ್ಗೆ ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.
ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಿರುವ ಶ್ರೀರಾಮ ಮಂದಿರದಲ್ಲಿ ದಿನಾಂಕ 22 ರಂದು ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವು ನಡೆಯಲಿದೆ ಎಂದು ಸುತ್ತೋಲೆ ಹೇಳಿದೆ.
ಎಲ್ಲಾ ಜನರ ಒಳಿತಿಗಾಗಿ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಜನವರಿ 22ರಂದು ಶ್ರೀರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಸಮಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಮಂಗಳಾರತಿಯನ್ನು ನಡೆಸಲು ಸೂಚಿಸಿದೆ ಎಂದು ಸುತ್ತೋಲೆ ತಿಳಿಸಿದೆ.
ಬಿ. ವೈ. ವಿಜಯೇಂದ್ರ ಸ್ವಾಗತ
ಜನವರಿ 22ರಂದು ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಮಂಗಳಾರತಿಯನ್ನು ನಡೆಸಲು ಸೂಚಿಸಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸ್ವಾಗತಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಕಾಂಗ್ರೆಸ್ಸಿಗರ ರಾಮ ನಿಂದನೆ ಹಾಗೂ ಸರ್ಕಾರದ ರಾಮಭಕ್ತರ ಮೇಲಿನ ಸೇಡಿನ ಕ್ರಮಗಳ ನಡುವೆಯೂ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಾಲಯಗಳಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ದಿನದಂದು ವಿಶೇಷ ಪೂಜೆ ಸಲ್ಲಿಸುವ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ” ಎಂದು ಹೇಳಿದ್ದಾರೆ. “ತಡವಾಗಿಯಾದರೂ ಕೆಟ್ಟ ಮೇಲೆ ಬುದ್ದಿ ಬಂದಿತು ಎನ್ನುವಂತೆ ಶ್ರೀ ರಾಮನ ಪ್ರೇರಣೆಯಿಂದ ಜ್ಞಾನೋದಯವಾದಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಈ ಸಂಬಂಧ ವಿವೇಕಯುತ ನಡವಳಿಕೆ ಪ್ರದರ್ಶಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರ ನಿಲುವು ಅತ್ಯಂತ ಸಮಂಜಸವಾಗಿದೆ” ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.