ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಜನವರಿ 22ರಂದು ಯೋಧ್ಯೆಯ ಶ್ರೀ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಇನ್ನು ರಾಮಮಂದಿರ ಲೋಕಾರ್ಪಣೆ ದಿನ ವಿಶೇಷ ‘ರಾಮ ಹಲ್ವಾ’ (Ram Halwa) ತಯಾರಿಸಲಾಗುತ್ತದೆ. ವಿಶೇಷ ಪ್ರಸಾದವನ್ನು ನಾಗ್ಪುರ ಮೂಲದ, ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗ (Chef) ವಿಷ್ಣು ಮನೋಹರ್ (Vishnu Manohar) ಅವರು ತಯಾರಿಸಲಿದ್ದಾರೆ.
ವಿಷ್ಣು ಮನೋಹರ್ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ. ಇದಕ್ಕಾಗಿ ಅವರು 12 ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಬೃಹತ್ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ.
‘900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್ ಹಾಲು, 2,500 ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪೌಡರ್ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು’ ಎಂದು ವಿಷ್ಣು ಮನೋಹರ್ ತಿಳಿಸಿದ್ದಾರೆ.
‘ಸುಮಾರು ಒಂದೂವರೆ ಲಕ್ಷ ಜನರಿಗೆ ರಾಮ ಹಲ್ವಾ ಪ್ರಸಾದ ವಿತರಣೆ ಮಾಡುವ ಕಾರಣ ದೊಡ್ಡ ಕಡಾಯಿಯನ್ನು ತಯಾರಿಸಲಾಗಿದೆ. ಕಡಾಯಿಯ ತೂಕವೇ 1,300-1,400 ಕೆಜಿ ಇದೆ. ಇದು 10 ಅಡಿ ಎತ್ತರ ಹಾಗೂ 10 ಅಡಿ ಅಗಲ ಇದೆ. ಇದನ್ನು ಕ್ರೇನ್ ಮೂಲಕವೇ ಎತ್ತಬೇಕಾಗುತ್ತದೆ. ನಮ್ಮ ತಂಡವು ರಾಮ ಹಲ್ವಾ ತಯಾರಿಸಲು ಉತ್ಸಾಹದಿಂದ ಸಜ್ಜಾಗಿದೆ. ಇದಕ್ಕಾಗಿ ಬೇಕಾಗುವ ಎಲ್ಲ ವಸ್ತುಗಳನ್ನು ಖರೀದಿಸಲಾಗಿದೆ’ ಎಂದು ವಿಷ್ಣು ಮನೋಹರ್ ಮಾಹಿತಿ ನೀಡಿದ್ದಾರೆ. ಹಾಗೆಯೇ, ಅಯೋಧ್ಯೆಯಲ್ಲಿ, ರಾಮಮಂದಿರ ಆವರಣದಲ್ಲಿ ರಾಮಾಯಣ ಕಾಲದ ತಳಿಯ ಸಸಿಗಳನ್ನು ನೆಡಲಾಗುತ್ತದೆ ಎಂದು ತಿಳಿದುಬಂದಿದೆ.