ಸಿಎಂ, ಡಿಸಿಎಂರಿಂದ ಜೆಡಿಎಸ್ ಶಾಸಕರಿಗೆ ಆಮಿಷ: ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ಹೊಸದಿಗಂತ ವರದಿ, ಬೆಂಗಳೂರು:

ಜೆಡಿಎಸ್ ಪಕ್ಷವನ್ನು ಮುಗಿಸುವುದೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಉದ್ದೇಶವಾಗಿದೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರದ ಕೃಷಿ ಹಾಗೂ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರನ್ನು ಬೀಳ್ಕೊಟ್ಟ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ದೇವೇಗೌಡರ ಬಗ್ಗೆ ಸಿಎಂ ಮಾತಾಡಿದ್ದಾರೆ. ಮಾತನಾಡುವವರು ಏನೇನು ಮಾಡಿದ್ದಾರೆ ಎನ್ನುವುದನ್ನು ನೋಡಿಕೊಂಡು ಬಂದಿದ್ದೇನೆ. ಜೆಡಿಎಸ್ ಮುಗಿಸಬೇಕು ಅನ್ನೋದೇ ಅವರ ಅಜೆಂಡಾ. ಅ ಇಬ್ಬರು ನಾಯಕರ ಅಜೆಂಡಾ ಇದೆ ಆಗಿದೆ. ಈಗಲೂ ಸಹ ಅವರು ಇವರ ಮನೆ ಬಾಗಿಲು ತಟ್ಟುತಿದ್ದಾರೆ ಎಂದರು.

ಕ್ಷೇತ್ರದ ಕೆಲಸಕ್ಕೆ ಹೋದರೆ ನಮ್ಮ ಶಾಸಕರನ್ನು ಕೂರಿಸಿಕೊಂಡು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬನ್ನಿ. ಏನ್ ಬೇಕೋ ಅದನ್ನು ಮಾಡಿಕೊಡುತ್ತೇವೆ ಎನ್ನುತ್ತಿದ್ದಾರೆ. ಎಷ್ಟು ಕೋಟಿ ಬೇಕೋ‌ ಅಷ್ಟು ಕೊಡ್ತೀವಿ, ಪಕ್ಷಕ್ಕೆ ಬನ್ನಿ ಅಂತಾರೆ. ಯಾವ ಕಾರಣಕ್ಕೆ ಇದನ್ನು ಮಾಡ್ತೀರಿ. ವಿರೋಧ ಪಕ್ಷ ಉಳಿಸೋಕೆ ಮಾಡ್ತಿರೋದಾ? ಜೆಡಿಎಸ್ ಮುಗಿಸಬೇಕು ಅಂತಲೇ ಇವರು ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ದೂರಿದರು.

ಯಾವ ಪಕ್ಷದಿಂದ ಬೆಳೆದುಕೊಂಡು ಬಂದರು ಇವರು? ಯಾರ ನಾಯಕತ್ವದಲ್ಲಿ ಈ ಹಂತಕ್ಕೆ ಬಂದರು? ಯಾವುದಕ್ಕೂ ಅವರಿಗೆ ಕೃತಜ್ಞತೆ ಅನ್ನುವುದು ಇಲ್ಲ. ದೇವೇಗೌಡರು ಅವರ ಶತ್ರುಗಳಿಗೂ ಶಾಪ ಹಾಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.

ದೇವೇಗೌಡರು ಈಗ ರಾಜ್ಯದಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ಅಕ್ರಮಗಳಿಂದ ಜನರೇ ಅವರನ್ನು ‌ಸಮಾಪ್ತಿ ಮಾಡ್ತಾರೆ ಅಂತ ಹೇಳಿದ್ದಾರೆ ಅಷ್ಟೆ. ಡಿಕೆಶಿ ನಮ್ಮ ಕಾಂಗ್ರೆಸ್ 135 ವರ್ಷದ ಪಕ್ಷ ಅಂತಾರೆ‌. ಗಾಂಧಿಜೀ‌ ಇದ್ದಾಗ ಇತಿಹಾಸ ಬೇರೆ. ಈಗ ಇವರ ಇತಿಹಾಸ ಏನು? ಸ್ವಾತಂತ್ರ್ಯ ತರುವಾಗ ಇತಿಹಾಸ ಬೇರೆ ಇತ್ತು. ಮನೆ ಆಸ್ತಿ ಮಾರಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರೆ . ಇವರು ಮಾಡ್ತಿರೋದು ಏನು? ಈಸ್ಟ್ ಇಂಡಿಯಾ ಕಂಪನಿ ಮಾಡಿದ ದರೋಡೆಯನ್ನೇ ಇವರು ಮುಂದುವರೆಸಿಕೊಂಡು ಹೋಗ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರ ಹಂಚಿಕೆ ಚರ್ಚೆ ಆಗಿಲ್ಲ:
ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಂದೆ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶ ಮಾತ್ರ ಇದೆ. ಅದರ ಬಗ್ಗೆ ಚರ್ಚೆ ಆಗಿದೆ. ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!