ಬೇಲೂರಿನಲ್ಲಿ ಜಕಣಾಚಾರಿ ಪ್ರತಿಮೆ ಸ್ಥಾಪನೆಗೆ ವಿಶ್ವಕರ್ಮ ಸಮಾಜ ಆಗ್ರಹ

 ಹೊಸದಿಗಂತ ವರದಿ, ಬೆಂಗಳೂರು:

ಬೇಲೂರು, ಹಳೇಬೀಡಿನ ದೇವಸ್ಥಾನಗಳನ್ನು ರೂಪಿಸಿದ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆಯನ್ನು ಬೇಲೂರಿನ ಚನ್ನಕೇಶವ ದೇವಾಲಯದ ಆವರಣದಲ್ಲಿ ಸ್ಥಾಪಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಸರ್ಕಾರಕ್ಕೆ ಆಗ್ರಹಪಡಿಸಿದ್ದಾರೆ.

ಶಾಸಕರ ಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಕಷ್ಟು ಹೋರಾಟದ ನಂತರ ಸರ್ಕಾರದ ವತಿಯಿಂದ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆ ಆಚರಿಸಲಾಗುತ್ತಿದೆ. ಇದರ ಜೊತಗೆ ಮುಂದಿನ ದಿನಗಳಲ್ಲಿ ಬೇಲೂರಿನಲ್ಲಿ ಪ್ರತಿಮೆ ಸ್ಥಾಪನೆ ಮಾಡಬೇಕೆಂದರು.

ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸಾಲ ಪಡೆದಿರುವ ವಿಶ್ವಕರ್ಮ ಸಮುದಾಯದ 92 ಸಾವಿರ ಜನರ ಬಡ್ಡಿ ಮತ್ತು ಅಸಲು ಮೊತ್ತವನ್ನು ಮನ್ನಾ ಮಾಡಬೇಕು ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

25 ವರ್ಷಗಳಿಂದ ಸಮಾಜದ ಒಳಿತಿಗಾಗಿ ಹೋರಾಡಿದ್ದೇನೆ. ಈ ಹಿಂದೆ ಕಾಂಗ್ರೆಸ್ ನಲ್ಲಿ ಇದ್ದಾಗ ವಿಶ್ವಕರ್ಮ ಅಭಿವೃದ್ಧಿ ನಿಮಗಮ ಸ್ಥಾಪನೆ ವಿಷಯವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವ ಮೂಲಕ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದು ಅನುಷ್ಠಾನಕ್ಕೆ ಬರುವಂತೆ ಮಾಡಿದೆ ಹಾಗೂ ಈಗ ಬಿಜೆಪಿಯಲ್ಲಿ ಇರುವಾಗ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಚರಿಸುವಂತೆ ಒತ್ತಡ ಹಾಕಿದ ಪರಿಣಾಮ ಈಗ ಸರ್ಕಾರದಿಂದ ದಿನಾಚರಣೆ ಆಚರಿಸುವಂತಾಗಿದೆ ಎಂದರು.

ವಿಶ್ವಕರ್ಮ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಸಮುದಾಯದಲ್ಲಿ ಗೊಂದಲ ಇಲ್ಲ. ಸಮಾಜದಲ್ಲಿ 41 ಉಪಜಾತಿಗಳು ಇದ್ದು, ಕುಲ ಶಾಸ್ತ್ರ ಅಧ್ಯಯನ ನಡೆದ ನಂತರ ಸ್ಪಷ್ಟ ಚಿತ್ರಣ ಹೊರ ಬರಲಿದೆ ಎಂದರು.

ಈ ವೇಳೆ ಶ್ರೀ ನಾಗಮೂರ್ತೆಂದ್ರ ಮಹಾಸ್ವಾಮಿಗಳು ಲೇಬಗೇರಿ, ಶ್ರೀ ದೊಡ್ಡೇಂದ್ರ ಮಹಾಸ್ವಾಮಿಗಳು, ಸುಲೇಪೇಟ, ಕಲಬುರ್ಗಿ, ಶ್ರೀ ಗಣೇಶ ಮಹಾಸ್ವಾಮಿಗಳು, ಕೊಪ್ಪಳ, ಶ್ರೀ ಮೌನೇಶ್ವರ ಮಹಾಸ್ವಾಮಿಗಳು ಹುಲಗೂರ ಶಿಗ್ಗಾವಿ, ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಲೋಹಿತ ಕಲ್ಲೂರ, ಬೆಂಗಳೂರು ನಗರ ಅಧ್ಯಕ್ಷರಾದ ಗಂಗಾಧರ, ಕೆ.ರಾಮು ಗಾಣದಾಳ, ಶ್ರೀಧರ್ ಬಡಿಗೇರ, ಮಾಜಿ ಮಹಿಳಾ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಎಸ್.ರವೀಂದ್ರ ಕುಮಾರ್ ಸೇರಿದಂತೆ ರಾಜ್ಯದಿಂದ ಆಗಮಿಸಿದ್ದ ಪಕ್ಷದ ಮುಖಂಡರು ಇತರ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!