ಹೊಸದಿಗಂತ, ಚಿಕ್ಕಮಗಳೂರು:
ದತ್ತಪೀಠ ಆವರಣದಲ್ಲಿ ಗೋರಿ ಹಾನಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಫೆ.7ಕ್ಕೆ ಮುಂದೂಡಿದೆ.
ಈ ನಡುವೆ ಚಾರ್ಜ್ ಶೀಟ್ ರದ್ದು ಕೋರಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಆವರಣದಲ್ಲಿ ಗೋರಿ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನ ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ನೀಡಿತ್ತು. ಈ ಹಿನ್ನೆಲೆ ಮೊದಲನೇ ಹೆಚ್ಚುವರಿ ಸಿವಿಲ್ ಜೆಎಂಎಫ್ ಸಿ ಕೋರ್ಟ್ ಗೆ ಇಂದು 12 ಆರೋಪಿಗಳು ಹಾಜರಾಗಿದ್ದರು. ಚಿತ್ರದುರ್ಗದ ಸಂದೇಶ್, ಹುಣಸೂರಿನ ರಾಮು ಜಾಮೀನು ಸಿಗದ ಕಾರಣ ಹಾಜರಾಗಿರಲಿಲ್ಲ.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ವೀರಭದ್ರಪ್ಪ ಫೆ.7 ಕ್ಕೆ ವಿಚಾರಣೆಯ ಮುಂದಿನ ದಿನಾಂಕ ನಿಗದಿ ಪಡಿಸಿತು. ಈ ನಡುವೆ ಚಾರ್ಜ್ ಶೀಟ್ ವಿಳಂಬ ಹಾಗೂ ಸರಿಯಾದ ಸಾಕ್ಷಾಧಾರ ಸಲ್ಲಿಸದಿರುವ ಕಾರಣ ನೀಡಿ ಚಾರ್ಜ್ ಶೀಟ್ ರದ್ದುಗೊಳಿಸುವಂತೆ ಕೋರಿ ಮೂರು ದಿನಗಳಲ್ಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹಿಂದು ಸಂಘಟನೆಗಳ ಕಾರ್ಯಕರ್ತರ ಪರ ವಕೀಲರಾದ ಎಚ್.ಎಂ ಸುಧಾಕರ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಪ್ರಕರಣವನ್ನು 6 ವರ್ಷಗಳ ನಂತರ ಮತ್ತೆ ಮರು ತನಿಖೆಗೆ ಒಳಪಡಿಸಿರುವುದಕ್ಕೆ ತುಡುಕೂರು ಮಂಜು ಸೇರಿದಂತೆ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದನ್ನಿಲ್ಲಿ ಸ್ಮರಿಸಬಹುದು.