ಹೊಸದಿಗಂತ ವರದಿ, ಚಿತ್ರದುರ್ಗ:
ಹೆತ್ತ ಮಗುವನ್ನೇ ಕೊಂದು ಸೂಟ್ ಕೇಸ್‌ನಲ್ಲಿ ಶವ ಸಾಗಿಸುತ್ತಿದ್ದ ಮಹಿಳೆಯೊಬ್ಬಳನ್ನು ಹಿರಿಯೂರು ತಾಲ್ಲೂಕಿನ ಐಮಂಗಲ ಠಾಣಾ ಪೊಲೀಸರು ಸೋಮವಾರ ಸಂಜೆ ವಶಕ್ಕೆ ಪಡೆದಿದ್ದಾರೆ.
ಬಂಧಿತ ಮಹಿಳೆಯನ್ನು ಸ್ಟಾರ್ಟ್ ಅಪ್ ಫೌಂಡರ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸುಚನಾ ಸೇಠ್ ಎಂದು ಗುರುತಿಸಲಾಗಿದೆ. ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸುಚನಾ ಸೇಠ್ ಅವರನ್ನ ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಗೋವಾದ ಕ್ಯಾಂಡೋಲಿಮ್ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಕೊಠಡಿ ಬಾಡಿಗೆ ಪಡೆದಿದ್ದ ಆಕೆ ಅಲ್ಲಿಯೇ ಮಗುವಿನ ಹತ್ಯೆ ಮಾಡಿದ್ದು, ಸೂಟ್‌ಕೇಸ್‌ನಲ್ಲಿ ಮಗುವಿನ ಶವದೊಂದಿಗೆ ಗೋವಾದಿಂದ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದರು ಎನ್ನಲಾಗಿದೆ.
ಗೋವಾದಲ್ಲಿ ಉತ್ತರ ಗೋವಾದ ಕ್ಯಾಂಡೋಲಿಮ್ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಈಕೆ ಉಳಿದಿದ್ದ ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಅಪಾರ್ಟ್‌ಮೆಂಟ್‌ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೂಮಿಗೆ ಹೋಗುವಾಗ ಜೊತೆಗಿದ್ದ ಮಗು, ರೂಮಿನಿಂದ ವಾಪಾಸ್ ಹೋಗುವಾಗ ಇರಲಿಲ್ಲ. ಈ ಕುರಿತು ವಿಚಾರಿಸಿದಾಗ ಸಂಬಂಧಿಕರ ಮನೆಗೆ ಕಳಿಸಿದ್ದೇನೆಂದು ಸುಳ್ಳು ಹೇಳಿದ್ದರು.
ಈ ಕುರಿತು ಮಾಹಿತಿ ದೊರೆತ ಕೂಡಲೇ ಗೋವಾ ಪೊಲೀಸರು ಟ್ಯಾಕ್ಸಿ ಡ್ರೈವರ್ ಸಂಪರ್ಕ ಮಾಡಿ, ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ. ಅದರಂತೆ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿ ೪ರ ಐಮಂಗಲ ಠಾಣೆಗೆ ಟ್ಯಾಕ್ಸಿ ಚಾಲಕ ತನ್ನ ವಾಹನವನ್ನು ಕೊಂಡೊಯ್ದಿದ್ದರು. ಪೊಲೀಸರು ಪರಿಶೀಲಿಸಿದಾಗ ಕಾರ್‌ನ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ನಾಲ್ಕು ವರ್ಷದ ಗಂಡುಮಗುವಿನ ಶವ ಪತ್ತೆಯಾಗಿದೆ.
ಮಗುವಿನ ಶವವನ್ನು ಮಾರ್ಚರಿಗೆ ಶಿಫ್ಟ್ ಮಾಡಿ ಆರೋಪಿ ಸುಚನಾ ಅವರನ್ನು ವಶಕ್ಕೆ ಪಡೆದ ಐಮಂಗಲ ಪೊಲೀಸರು, ಗೋವಾ ಪೊಲೀಸರಿಗೆ ಆರೋಪಿ ಮಹಿಳೆಯನ್ನು ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಗೋವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.