ಹೊಸದಿಗಂತ ವರದಿ ಹುಬ್ಬಳ್ಳಿ:
ರಾಮ ಒಬ್ಬನೇ ದೇವರಾ ನಮಗೆ ? ನಮ್ಮೂರಿನಲ್ಲಿ ಹಲವಾರು ದೇವರ ದೇವಸ್ಥಾನಗಳಿವೆ. ಬಿಜೆಪಿ ಅವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಆರೋಪಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಳವ್ವ, ಹನಮಂತ, ದುರ್ಗವ್ವ ದೇವರ ಅಲ್ವಾ? ರಾಮ ಮಂದಿರಕ್ಕೆ ಹೋದ್ರೆ ಅಷ್ಟೇನಾ ಹಿಂದೂಗಳು. ಇಂತಹ ಸಾವಿರ ಗುಡಿ ನಾವ ಕಟ್ಟಿದ್ದೇವೆ. ನಮ್ಮೂರಲ್ಲಿ ಇರೋ ದೇವರು ದೇವರಲ್ಲಾ ಎಂದು ಪ್ರಶ್ನಿಸಿದರು.
ಬಿಜೆಪಿ ಅವರಿಗೆ ಹಳ್ಳಿಯಲ್ಲಿ ಇರೋ ದೇವರು ಕಾಣಲ್ಲ. ಅಕಸ್ಮಾತ್ ಅವರು ದೇವರ ಬಗ್ಗೆ ಮಾತನಾಡದಿದ್ದರೆ ಮನೆಗೆ ಹೋಗುವುದು ನಿಶ್ಚಿತ. ಜನರು ಸಹ ಈಗ ಬಹಳ ಬುದ್ದಿವಂತರಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ ಕೆಲಸವೇನು? ಕಸ ಹೊಡೆಯುವುದಾ? ಹೋಗಿ ರಾಮ ಮಂದಿರದಲ್ಲಿ ಕುಳಿತಿದ್ದಾರೆ. ದೇಶದ ಜನರು ಯಾಕೆ ಅವರನ್ನು ಗೆಲಿಸಿದ್ದಾರೆ? ರಾಮ ಮಂದಿರದಲ್ಲಿ ಹೋಗಿ ಕುಳಿತುಕೊಳ್ಳುವುದಕ್ಕಾ? ಉದ್ಯೋಗ ವಿಲ್ಲದೆ ದೇಶ ಜನರ ನೋವು ಅನುಭವಿಸುತ್ತಿದ್ದಾರೆ. ಮಂದಿರಕ್ಕೆ ಹೋದರೆ ಹಣ ಬರುತ್ತಾ ಎಂದು ಪ್ರಶ್ನಿಸಿದರು.
ಶ್ರೀರಾಮ ನಮಗೂ, ನಿಮಗೂ ದೇವರು. ಅದನ್ನು ದೇಶದಲ್ಲಿರುವ ಜನರ ಮೇಲೆ ಹೇರುವ ಕೆಲಸ ಆಗಬಾರದು. ಹಿಂದೂಗಳಿಗೆ ರಾಮ ಒಬ್ಬನೇ ದೇವರಾ, ಸಾವಿರಾರ ದೇವರುಗಳಿವೆ. ಇದನ್ನು ಬಿಂಬಿಸುವ ಮೂಲಕ ಕಾಂಗ್ರೆಸ್ ನವರಿಗೆ ಅಲ್ಪ ಸಂಖ್ಯಾತರ ಪರ ಎಂದು ಹಣೆ ಪಟ್ಟಿ ಕಟ್ಟಿದ್ದಾರೆ ಎಂದು ಹೇಳಿದರು.
ರಾಜಕೀಯಕ್ಕಾಗಿ ರಾಮ ಮಂದಿರ ಉಪಯೋಗ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಾವು ದಿನಾಲೂ ಗುಡಿ ಕಟ್ಟುತ್ತೇವೆ. ಲೋಕಸಭೆ ಚುನಾವಣೆ ಬಂದಿದೆ ಎಂದು ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.