Friday, January 2, 2026

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಈ ದಿನ ಹಳಿ ಏರಲಿದೆ ಮೊದಲ ವಂದೇ ಭಾರತ್ ಸ್ಲೀಪರ್ ಟ್ರೈನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಗುವಾಹಟಿ-ಕೊಲ್ಕತ್ತಾ ಮಾರ್ಗದಲ್ಲಿ ಸಂಚಾರ ನಡೆಸಲಿದ್ದು, ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ. ಇದೀಗ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಉದ್ಘಾಟನೆ ದಿನಾಂಕ, ರೈಲು ಸೇವೆ ಮಾರ್ಗಗಳ ವಿವರ ಬಹಿರಂಗವಾಗಿದೆ.

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಕುರಿತು ಮಾಹಿತಿ ನೀಡಿದ್ದಾರೆ. ಮುಂದಿನ 15 ರಿಂದ 20 ದಿನದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳಲಿದೆ ಎಂದಿದ್ದಾರೆ. ಅಂದರೆ ಜನವರಿ ಅಂತ್ಯದೊಳಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳುತ್ತಿದೆ ಎಂಬುದು ಖಚಿತವಾಗಿದೆ.

ಗೌವ್ಹಾಟಿ ಹಾಗೂ ಕೋಲ್ಕತಾ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದಿದ್ದಾರೆ. ಸ್ಲೀಪರ್ ರೈಲು ದೂರ ಪ್ರಯಾಣಕ್ಕೆ ಆರಾಮಾಗಿ ಪ್ರಯಾಣ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

‘ಬಹಳ ದಿನಗಳಿಂದ ಹೊಸ ಪೀಳಿಗೆಯ ರೈಲುಗಳಿಗೆ ಬೇಡಿಕೆ ಹೆಚ್ಚಾಗಿದೆ. ವಂದೇ ಭಾರತ್ ಚೇರ್ ಕಾರ್ ಭಾರತೀಯ ರೈಲ್ವೆಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದೆ. ಜನರು ಇದನ್ನು ತುಂಬಾ ಇಷ್ಟಪಡಲು ಪ್ರಾರಂಭಿಸಿದ್ದಾರೆ. ವಂದೇ ಭಾರತ್ ರೈಲುಗಳನ್ನು ಓಡಿಸಲು ದೇಶದ ಮೂಲೆ ಮೂಲೆಗಳಿಂದ ಬೇಡಿಕೆಗಳು ಬರುತ್ತಿವೆ’ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಬೆಲೆ ಎಷ್ಟು?
ವಂದೇ ಭಾರತ್ ಸ್ಲೀಪರ್ ರೈಲಿನ ಬೆಲೆ ದುಬಾರಿಯಲ್ಲ. ಹೊಸ ದರಗಳ ಪ್ರಕಾರ, 3ನೇ ಎಸಿ ಕೋಚ್‌ಗಳ ದರ ಆಹಾರ ಸೇರಿದಂತೆ 2,300 ರೂ., 2ನೇ ಎಸಿ ದರ 3,000 ರೂ. ಮತ್ತು 3ಡಿಡಿ ಎಸಿ ಕೋಚ್‌ಗಳ ದರ 3,600 ರೂ. ಆಗಿರುತ್ತದೆ. ಈ ಎಲ್ಲಾ ದರಗಳು ಆಹಾರವನ್ನು ಒಳಗೊಂಡಿರುತ್ತವೆ. “ಇದರ ಪ್ರಯಾಣ ದರವನ್ನು ವಿಮಾನದ ದರಕ್ಕಿಂತ ಕಡಿಮೆ ಇರಿಸಲಾಗಿದೆ. ಗುವಾಹಟಿಯಿಂದ ಹೌರಾಗೆ ವಿಮಾನ ದರ ಸಾಮಾನ್ಯವಾಗಿ 6,000 ರೂ.ನಿಂದ 8,000 ರೂ.ವರೆಗೆ ಇರುತ್ತದೆ. ವಂದೇ ಭಾರತ್ ರೈಲಿನಲ್ಲಿ 3ನೇ ಎಸಿ ದರವು ಊಟ ಸೇರಿದಂತೆ ಸುಮಾರು 2,300 ರೂ. ಇರಲಿದೆ. 2ನೇ ಎಸಿಗೆ ಸುಮಾರು 3,000 ರೂ. ಮತ್ತು 1ನೇ ಎಸಿಗೆ ಸುಮಾರು 3,600 ರೂ. ಆಗಿರುತ್ತದೆ. ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಈ ದರಗಳನ್ನು ನಿಗದಿಪಡಿಸಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ವಂದೇ ಭಾರತ್ ಸ್ಲೀಪರ್ ರೈಲನ್ನು ಸಾವಿರ ಕಿಲೋಮೀಟರ್‌ಗಳಿಗೂ ಹೆಚ್ಚಿನ ದೂರದ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ರೈಲು ದೂರದ ಪ್ರಯಾಣಿಕರಿಗೆ ವೇಗದ, ಆರಾಮದಾಯಕ ಮತ್ತು ಆಧುನಿಕ ಪ್ರಯಾಣದ ಅನುಭವವನ್ನು ನೀಡುತ್ತದೆ. ವಂದೇ ಭಾರತ್ ಸ್ಲೀಪರ್ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು, ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆ ಮತ್ತು ರಾತ್ರಿ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ವಿಶ್ವ ದರ್ಜೆಯ ಸ್ಲೀಪರ್ ಕೋಚ್‌ಗಳನ್ನು ಹೊಂದಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ತಿಂಗಳ ಅಂತ್ಯದೊಳಗೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆಗೊಳ್ಳಲಿದೆ. ಇನ್ನು ಮತ್ತೊಂದು ಗುಡ್ ನ್ಯೂಸ್ ಏನಂದರೆ, ಇದೇ ವರ್ಷದ ಅಂತ್ಯದೊಳಗೆ 12 ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲಿದೆ. ವಿವಿಧ ಮಾರ್ಗದಲ್ಲಿ ಈ ಸ್ಲೀಪರ್ ರೈಲು ಸೇವೆ ನೀಡಲಿದೆ.

error: Content is protected !!