ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಬಿಎ ಪಾಲಿಕೆಗಳು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
2026ರ ವರ್ಷ ಶುಭ ಲಗ್ನದಲ್ಲಿ ಆರಂಭವಾಗಿದೆ. 2025ರ ವರ್ಷದಲ್ಲಿ ನಾವು ಉತ್ತಮ ಆಡಳಿತ ನೀಡಿದ್ದೇವೆ. ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಟೆಕ್ ಸಮ್ಮೇಳನ ಮೂಲಕ ನಾವು ಕರ್ನಾಟಕವನ್ನು ಮುನ್ನಡೆಸಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದರು.
ನೀರಾವರಿ ಇಲಾಖೆಯಲ್ಲಿ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಯುಕೆಪಿ, ತುಂಗಾಭದ್ರ ಯೋಜನೆಯಲ್ಲಿ ನಾವು ಕೈಗೊಂಡ ತೀರ್ಮಾನ, ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ಇಟ್ಟಿರುವ ನಂಬಿಕೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಅವರ ನಂಬಿಕೆ ಉಳಿಸಿಕೊಳ್ಳಲು, ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ನನ್ನ 35 ವರ್ಷಗಳ ರಾಜಕಾರಣದಲ್ಲಿ ಬೆಂಗಳೂರಿಗೆ ಇಷ್ಟು ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ. ಪ್ರಧಾನಮಂತ್ರಿ ಕೂಡ ಬೆಂಗಳೂರಿಗೆ ಬಂದಾಗ ಈ ನಗರವನ್ನು ಕೊಂಡಾಡಿದರು. ಅವರು ನಮ್ಮ ನಗರಕ್ಕೆ ಅನುದಾನ ನೀಡದಿದ್ದರೂ ನಾವು ಈ ನಗರಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.

