ಹೊಸದಿಗಂತ, ಬೀದರ್:
ಜನವರಿ 22ರಂದು ಅಯೋಧ್ಯೆಯ ನವನಿರ್ಮಿತ ರಾಮ ಮಂದಿರದಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ಜರುಗಲಿದೆ. ಈ ನಿಮಿತ್ಯ ಬೀದರ್ ಜಿಲ್ಲೆಯಾದ್ಯಂತ ವಿಶ್ವ ಹಿಂದು ಪರಿಷತ್ತು ಮತ್ತು ಶ್ರೀ ಪಾಪನಾಶ ಮಹಾದೇವ ಮಂದಿರದ ಟ್ರಸ್ಟ್ ವತಿಯಿಂದ ಈ ಕೆಳಗಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆಯಾ ಮಂದಿರಗಳಲ್ಲಿ ಪ್ರತಿಷ್ಠಾಪನೆಯಾಗುವ ದಿನ ವಿವಿಧ ದೇವತೆಗಳ ಭಜನೆ, ಕೀರ್ತನೆ, ಪೂಜೆ ಮತ್ತು ಆರತಿ ಮಾಡುವುದು, ಶ್ರೀರಾಮ ಜಯರಾಮ ವಿಜಯ ಮಹಾಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪಿಸುವುದು. ಜೊತೆಗೆ ಹನುಮಾನ್ ಚಾಲಿಸಾ, ರಾಮರಕ್ಷಾ ಸ್ತೋತ್ರ ಪಠಣ ಮಾಡಲಾಗುವುದು. ಸಂಜೆ ಸೂರ್ಯಾಸ್ತದ ಮೇಲೆ ತಮ್ಮ ಮನೆಗಳ ಮುಂದೆ ಕನಿಷ್ಠ 5 ದೀಪಗಳನ್ನು ಬೆಳಗಿಸಲಾಗುತ್ತದೆ.
ಕಾರ್ಯಕ್ರಮದ ವಿವರಗಳು:
ದಿನಾಂಕ: 22-01-2024 ರ ಸೋಮವಾರದಂದು ಮೂರ್ತಿ ಪ್ರತಿಷ್ಠಾಪನೆಯ ನಿಮಿತ್ಯ ಜಿಲ್ಲೆಯ ಎಲ್ಲಾ ಮಂದಿರ ಮನೆಗಳಿಗೂ ಅಲಂಕಾರಗೊಳಿಸಿ, ಹಬ್ಬದ ವಾತಾವರಣ ನಿರ್ಮಿಸಿ, ರಂಗೋಲಿ ಹಾಕಿ ಸಜ್ಜುಗೊಳಿಸುವುದು. ಎಲ್ಲಾ ಸದ್ಭಕ್ತರು ತಮಗೆ ಅನುಕೂಲವಿರುವ ಹತ್ತಿರ ಯಾವುದೇ ದೇವಸ್ಥಾನದಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.
ವಿಶೇಷವೆಂದರೆ, ದಿನಾಂಕ: 22-01-2024 ರಂದು ಬೀದರ ನಗರ ದೇವತೆಯಾದ ಪಾಪನಾಶ ಮಹಾದೇವ ದೇವಸ್ಥಾನದಲ್ಲಿ ದೇವಸ್ಥಾನವು ಅತೀ ಮಹತ್ವ ಹೊಂದಿದೆ. ಶ್ರೀರಾಮನು ಇಲ್ಲಿಂದ ಹಾದು ಹೋಗುವಾಗ ಈ ಲಿಂಗ ಉದ್ಭವವಾಗಿದೆ. ಅಂಥ ಒಂದು ಶ್ರೇಷ್ಠ ದೇವಸ್ಥಾನದಲ್ಲಿ ಪುಣ್ಯಪ್ರದವಾದ ಪಾಪನಾಶದಲ್ಲಿ ವಿಶ್ವಹಿಂದು ಪರಿಷತ್ತು ಮತ್ತು ಮಹಾದೇವ ಟ್ರಸ್ಟ್ನವರು ಲಕ್ಷದೀಪೋತ್ಸವ ಏರ್ಪಡಿಸಲು ಮುಂದೆ ಬಂದಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಯಿಂದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ, ಸಂಜೆ 6 ಗಂಟೆಯಿಂದ ದೀಪಗಳನ್ನು ಪ್ರಜ್ವಲಿಸುವ ಕಾರ್ಯಕ್ರಮವಿರುತ್ತದೆ. ಉತ್ತಮ ರಂಗೋಲಿ ಬಿಡಿಸಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು.
ಇದಲ್ಲದೇ ಅದೇ ದಿನಾಂಕದಂದು ಬೃಹತ್ ಸತ್ಸಂಗ ಮತ್ತು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳು ಮುಗಿದ ನಂತರ ಸಂಜೆ 8 ಗಂಟೆಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಪಾಪನಾಶ ದೇವಸ್ಥಾನದ ಅಧ್ಯಕ್ಷರಾದ ಚಂದ್ರಕಾಂತ ಶೆಟಕಾರ ಹಾಗೂ ವಿಶ್ವ ಹಿಂದು ಪರಿಷತ್ತ್ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್ ನೌಬಾದೆ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.