ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಗ್ರಾಮದ ಸತ್ಯಸಾಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಏಕೈಕ ಸೌಹಾರ್ದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಒನ್ ವರ್ಲ್ಡ್ ತಂಡವು ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿತು. ಈ ಚಾರಿಟಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುವರಾಜ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಚಿನ್ ಬಳಗ 19.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕುವ ಮೂಲಕ ಗೆಲುವಿನ ದಡ ಸೇರಿತು.
ಗೆಲುವಿನ ಸಿಕ್ಸರ್ ಬಾರಿಸಿದ ಪಠಾಣ್
19ನೇ ಓವರ್ ಬೌಲ್ ಮಾಡಿದ ಚಮಿಂದಾ ವಾಸ್ ಎರಡು ವಿಕೆಟ್ ಪಡೆದರು. ಮೊದಲ ಸೆಟ್ ಬ್ಯಾಟ್ಸ್ಮನ್ ಅಲ್ವಿರೊ ಪೀಟರ್ಸನ್ರನ್ನು ಬಲೆಗೆ ಬೀಳಿಸಿದರೆ, ಆ ಬಳಿಕ ಹರ್ಭಜನ್ ಸಿಂಗ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಹೀಗಾಗಿ ಪಂದ್ಯ ಕೊನೆಯ ಓವರ್ ರೋಚಕತೆಗೆ ಸಾಕ್ಷಿಯಾಯಿತು. ಏಕೆಂದರೆ ಕೊನೆಯ ಓವರ್ನಲ್ಲಿ ಸಹೋದರರ ನಡುವೆ ಸವಾಲು ಎದುರಾಗಿತ್ತು. ಒನ್ ವರ್ಲ್ಡ್ ತಂಡದ ಪರ ಇರ್ಫಾನ್ ಪಠಾಣ್ ಸ್ಟ್ರೈಕ್ನಲ್ಲಿದ್ದರೆ, ಬೌಲಿಂಗ್ನಲ್ಲಿ ಯೂಸುಫ್ ಪಠಾಣ್ ಇದ್ದರು. ಈ ವೇಳೆ ಯೂಸುಫ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಇರ್ಫಾನ್ ಒನ್ ವರ್ಲ್ಡ್ ತಂಡಕ್ಕೆ ಜಯ ತಂದುಕೊಟ್ಟರು