ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದರೂ, ನೆಲಮಟ್ಟದಲ್ಲಿ ಖರೀದಿ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ, ಖರೀದಿ ಕೇಂದ್ರಗಳು ಕೇವಲ ಹೆಸರಿನ ಮಟ್ಟಕ್ಕೆ ಸೀಮಿತವಾಗಿವೆ ಎಂದು ಗದಗ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರು ಆರೋಪಿಸಿದ್ದಾರೆ.
ಲಕ್ಷ್ಮೇಶ್ವರ ಮತ್ತು ಮುಳಗುಂದ ಭಾಗಗಳಲ್ಲಿ ರೈತರು ತಮ್ಮ ಬೆಳೆ ಮಾರಾಟಕ್ಕೆ ದಾರಿ ಕಾಣದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಂಬಲ ಬೆಲೆಯಲ್ಲಿ ಇದುವರೆಗೂ ಒಂದೂ ಕ್ವಿಂಟಾಲ್ ಮೆಕ್ಕೆಜೋಳ ಖರೀದಿಯಾಗಿಲ್ಲ. ಸರ್ಕಾರ ರೈತರೊಂದಿಗೆ ನಾಟಕವಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 1.44 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, ಪ್ರತಿ ಹೆಕ್ಟೇರ್‌ಗೆ ಸರಾಸರಿ 30ರಿಂದ 40 ಕ್ವಿಂಟಲ್ ಇಳುವರಿ ಬಂದಿದೆ. ಒಟ್ಟು ಸುಮಾರು 45 ಲಕ್ಷ ಕ್ವಿಂಟಲ್ ಉತ್ಪಾದನೆಯಾಗಿದ್ದರೂ, ಕೇವಲ 2 ಸಾವಿರ ರೈತರಷ್ಟೇ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ರೈತರು ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 1500ರಿಂದ 1700 ರೂ.ಗೆ ಮೆಕ್ಕೆಜೋಳ ಮಾರಾಟ ಮಾಡಲು ತಯಾರಾಗಿದ್ದಾರೆ. ಇದರಿಂದ ಪ್ರತಿ ಕ್ವಿಂಟಲ್‌ಗೆ 500ರಿಂದ 700 ರೂ. ನಷ್ಟವಾಗುತ್ತಿದೆ. ತಕ್ಷಣ ಖರೀದಿ ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

