ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭು ಶ್ರೀರಾಮಚಣದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಾಳೆ ರಾಮಲಲಾ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪೊಲೀಸ್ ಬಂದೋಬಸ್ತ್
ಬಿಗಿಗೊಳಿಸಲಾಗಿದೆ.
ಮಂಗಳೂರು ನಗರದಲ್ಲಿ ಕೈಗೊಂಡಿರುವ ಬಂದೋಬಸ್ತ್ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂರು ಮಂದಿ ಡಿಸಿಪಿ, ಆರು ಎಸಿಪಿ, 11 ಪಿಐ, 37 ಪಿಎಸ್‌ಐ ದರ್ಜೆಯ ಅಧಿಕಾರಿಗಳನ್ನು ಹಾಗೂ 781 ಪೊಲೀಸ್ ಸಿಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದಿದ್ದಾರೆ.
ನಗರ ವ್ಯಾಪ್ತಿಯಲ್ಲಿನ ದೇವಸ್ಥಾನ, ಮಂದಿರ ಹೀಗೆ ಒಟ್ಟು 196 ಕಡೆಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ಗುರುತಿಸಲಾಗಿದ್ದು, 131 ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಪಿಕೆಟಿಂಗ್ ನೇಮಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ನಗರದಾದ್ಯಂತ 57 ಸೆಕ್ಟರ್ ಮೊಬೈಲ್ ಗಳನ್ನು 24 ಗಂಟೆ ಹಗಲು ರಾತ್ರಿ ಗಸ್ತಿನಲ್ಲಿರುವ ವ್ಯವಸ್ಥೆಯನ್ನು ಮಾಡಲಾಗಿದೆ. 14 ಸ್ಥಳಗಳಲ್ಲಿ ಚೆಕ್ ಪಾಯಿಂಟ್ ಗಳನ್ನು ನಿಯೋಜಿಸಲಾಗಿದೆ. 9 ಸಿಎಆರ್ ಮತ್ತು 3 ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ತಡರಾತ್ರಿ ಹಾಗೂ ಮುಂಜಾನೆ ವಿಶೇಷ ಗಸ್ತು ಆಯೋಜಿಸಲಾಗಿದೆ. ನಗರದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿಧ್ವಂಸಕ ತಪಾಸಣಾ ತಂಡ ಕಣ್ಗಾವಲಿರಿಸಲಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮೆರವಣಿಗೆ, ರ್‍ಯಾಲಿಗಳಿಗೆ ಅನುಮತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.