ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಕುಟುಂಬ ಸಮೇತರಾಗಿ ಅಯೋಧ್ಯೆಯಲ್ಲಿ ನಡೆಯುವ ರಾಮಲಲಾ ಪ್ರಾಣ ಪ್ರತಿಷ್ಠೆಗೆ ಹೊರಟಿದ್ದಾರೆ.
ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ದೇವೇಗೌಡರ ಕುಟುಂಬದ ಸದಸ್ಯರಾದ ಶ್ರೀಮತಿ ಚನ್ನಮ್ಮ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನಟ ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರಿಗೆ ಸಾಥ್ ನೀಡಿದರು.
ಅಯೋಧ್ಯೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, ನಾನು ನನ್ನ ಪತ್ನಿ, ಕುಮಾರಸ್ವಾಮಿ, ನಿಖಿಲ್ ಅಯೋಧ್ಯೆಗೆ ಹೋಗ್ತಿದ್ದೇವೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮ ಮಾಡ್ತಿರೋದು ಅವರ ಪೂರ್ವ ಜನ್ಮದ ಪುಣ್ಯವಾಗಿದೆ. ಅವರಿಗೆ ಈ ಕೆಲಸ ಮಾಡೋ ಶಕ್ತಿಯೂ ಕೂಡ ಪೂರ್ವ ಜನ್ಮದ ಪುಣ್ಯದಿಂದಲೇ ಸಿಕ್ಕಿದೆ. ಮಾಜಿ ಪ್ರಧಾನಿ ವಾಜಪೇಯಿ ಕೂಡ 6 ವರ್ಷ ಪ್ರಧಾನಿ ಆಗಿದ್ದರು. ಆದರೆ, ರಾಮ ಮಂದಿರದ ಮೊದಲ ಕಲ್ಲು ಸ್ವೀಕಾರ ಮಾಡೋಕು ಅವತ್ತು ವಾಜಪೇಯಿ ಅವರಿಗೆ ಕಷ್ಟ ಆಯ್ತು. ಇದು ಮೋದಿ ಅವರ ಪೂರ್ವ ಜನ್ಮ ಪುಣ್ಯವಾಗಿದೆ ಎಂದರು.
ಮೋದಿ ಅವರು ಶಿವ, ವಿಷ್ಣು ಪ್ರಾರ್ಥನೆ ಮಾಡಿದ್ದಾರೆ. ಅವರಿಗೆ ಶಿವ, ವಿಷ್ಣು ವ್ಯತ್ಯಾಸ ಇಲ್ಲ. ಹಿಂದಿನ ಜನ್ಮದಲ್ಲಿ ದೊಡ್ಡ ದೈವ ಭಕ್ತರಾಗಿ ಜನ್ಮ ತಾಳಿದ್ದರು ಅನ್ನಿಸುತ್ತದೆ. ಈ ಸಂದರ್ಭದಲ್ಲಿ ಅ ಯೋಗ ಮೋದಿ ಅವರಿಗೆ ಬಂದಿದೆ. 11 ದಿನ ವೃತ ಮಾಡಿದ್ದಾರೆ. ಪುಣ್ಯ ಕ್ಷೇತ್ರಗಳ ಸ್ನಾನ ಮಾಡ್ತಿದ್ದಾರೆ. ಇದು ತುಂಬಾ ವಿಶೇಷವಾಗಿದೆ. ನಾನು ದೈವಭಕ್ತ. ಒಂದು ದಿನ ವ್ರತ ಮಾಡಬಹುದು. ಆದರೆ, ಹೀಗೆ ಮಾಡಲು ಆಗೊಲ್ಲ. ತಮ್ಮ ನಿತ್ಯದ ಕೆಲಸ ಕಾರ್ಯಕ್ರಮಗಳ ಜೊತೆ ವೃತ ಮಾಡ್ತಾರೆ. ಇದೊಂದು ದೊಡ್ಡ ವಿಶೇಷವಾಗಿದೆ. ಮೋದಿ ಅವರಿಗೆ ಇದು ಪೂರ್ವ ಜನ್ಮದ ಪುಣ್ಯ. ವಿಶ್ವದಲ್ಲಿ ಇದೊಂದು ದಾಖಲೆ ಎಂದರು.
ಪವಿತ್ರ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗವಹಿಸಬೇಕು. ನಮ್ಮಲ್ಲಿ ಶೃಂಗೇರಿ, ಪೇಜಾವರ ಮಠ ಸೇರಿ ನೂರಾರು ಮಠಗಳು ಇವೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಎಲ್ಲಾ ದೇವರು ನಂಬಿದ್ದೇವೆ. ಜನರು ವ್ಯತ್ಯಾಸ ತೋರಿಸೋದಿಲ್ಲ. ಆಧ್ಯಾತ್ಮಿಕವಾಗಿ ಇದನ್ನ ನಂಬಿದ್ದಾರೆ. ನಡೆದುಕೊಂಡು ಬಂದಿದ್ದಾರೆ. ರಾಜ್ಯದ ಜನರಿಗೆ ನಾನು ತಲೆ ಬಾಗಿ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದರು.