ಹೊಸದಿಗಂತ ವರದಿ,ಮಂಡ್ಯ :
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಂಭ್ರಮದ ರಾಮೋತ್ಸವ, ಹಲವು ರಾಮ ಮಂದಿರಗಳ ಲೋಕಾರ್ಪಣೆ, ದೇವಾಲಯಗಳ ಉದ್ಘಾಟನೆ, ರಾಮನ ಪ್ರಾಣ ಪ್ರತಿಷ್ಠಾಪನೆ ನಡೆಸಲು ಸಕಲ ಸಿದ್ಧತೆ ನಡೆದಿದೆ.
ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ತಿರುಮಲ ದೇವಾಲಯ, ಮಂಡ್ಯ ನಗರದ ಲೇಬರ್ ಕಾಲೋನಿಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಸೇರಿದಂತೆ ಹತ್ತು ಹಲವು ದೇವಾಲಯಗಳ ಲೋಕಾರ್ಪಣಾ ಕಾರ್ಯಗಳು ನಡೆಯಲಿವೆ.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿರುವ ರಾಮ ಮಂದಿರಗಳು, ವಿಷ್ಣು ದೇಗುಲ, ಆಂಜನೇಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜಾ ಕಾರ‌್ಯಕ್ರಮಗಳನ್ನು ನಡೆಸಲು ಭಕ್ತಾಧಿಗಳು ಸನ್ನದ್ಧರಾಗಿದ್ದಾರೆ.
ಹಲವು ದೇವಾಲಯಗಳಲ್ಲಿ ಹೋಮ, ಹವನ, ಪೂಜಾ ವಿಧಿ ವಿಧಾನಗಳನ್ನು ನಡೆಸುತ್ತಿದ್ದು, ಇನ್ನು ಕೆಲವೆಡೆ ಜಾನಪದ ಕಲಾತಂಡಗಳು, ಪೂರ್ಣಕುಂಭದೊಂದಿಗೆ ಉತ್ಸವಗಳ ಮೆರವಣಿಗೆ, ಬೈಕ್ ರ್ಯಾಲಿ, ಮೆರವಣಿಗೆ, ರಾಸುಗಳ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ‌್ಯಕ್ರಮಗಳು ಇಂದು ರಾತ್ರಿಯಿಂದಲೇ ಪ್ರಾರಂಭವಾಗಿವೆ.
ಇಲ್ಲಿನ ನೆಹರುನಗರದಲ್ಲಿ ಹನುಮನ ವಿಗ್ರಹ ಲೋಕಾರ್ಪಣೆ ಮಾಡಿದರೆ, ಉದಯಗಿರಿಯ ಶ್ರೀರಾಮನ ಪ್ರತಿಷ್ಠಾಪನೆ, ಚಿಕ್ಕೇಗೌಡನದೊಡ್ಡಿಯಲ್ಲಿ ರಾಮಮಂದಿರ ಲೋಕಾರ್ಪಣೆ, ಗಾಂಧಿನಗರದಲ್ಲಿ ಶ್ರೀರಾಮ ಮಂದಿರ, ಕಲ್ಲಹಳ್ಳಿಯ ಶ್ರೀ ಆಂಜನೇಯಸ್ವಾಮಿ, ಬನ್ನೂರು ರಸ್ತೆಯಲ್ಲಿರುವ ಶೀ ಆಂಜನೇಯಸ್ವಾಮಿ, ಹಳೇ ತಾಲೂಕು ಕಚೇರಿ ಆವರಣದಲ್ಲಿರುವ ಶ್ರೀರಾಮ ಮಂದಿರ, ವಿನೋಭ ರಸ್ತೆಯಲ್ಲಿರುವ ಶ್ರೀ ಸೀತಾರಾಮ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ರಾಮೋತ್ಸವ ನಡೆಯಲಿದೆ.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೇಸರಿ ಧ್ವಜಗಳು, ಬಂಟಿಂಗ್ಸ್, ಶ್ರೀರಾಮ, ಆಂಜನೇಯನ ಕಟೌಟ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.
ಪ್ರಮುಖ ವೃತ್ತಗಳು, ರಸ್ತೆಗಳನ್ನು ಕಾರ್ಯಕ್ರಮ ನಡೆಯಲಿವೆ. ಎಲ್ಲೆಲ್ಲೂ ನಾಮನಾಮ ಜಪ ನಡೆಯುತ್ತಿದೆ.
ಮಂಡ್ಯ ನಗರದಲ್ಲಿ ರಸ್ತೆ ವಿಭಜಕಗಳಲ್ಲಿನ ವಿದ್ಯುತ್ ಮತ್ತು ಟೆಲಿಫೋನ್ ಕಂಬಗಳಿಗೆ ಕೇಸರಿ ಬಾವುಟಗಳನ್ನು ಕಟ್ಟಡಲಾಗಿದೆ. ಕೇಸರಿ ಬಟ್ಟೆಯಿಂದ ತಯಾರಿಸಿದ ಚಿಕ್ಕದಾದ ಬಾವುಟಗಳ ಸರಗಳನ್ನು ಕಟ್ಟಲಾಗಿದೆ. ಕಂಬಗಳನ್ನು ಕೇಸರಿ ಬಟ್ಟೆಯಿಂದ ಸುತ್ತಲಾಗಿದೆ.
ಸೆಲ್ಫಿ ವಿತ್ ನನ್ನ ರಾಮ :
ನಗರದ ಬಿಜೆಪಿ ಕಚೇರಿಯ ವಿಕಾಸ ಭವನದ ಆವರಣದಲ್ಲಿ ಸೆಲ್ಫಿ ವಿತ್ ನನ್ನ ರಾಮ ಕಾರ‌್ಯಕ್ರಮವೂ ವಿಶೇಷವಾಗಿ ನಡೆಯಿತು. ಅಯೋಧ್ಯೆಯ ರಾಮಮಂದಿರ ಹಾಗೂ ಶ್ರೀರಾಮನ ಫೋಟೋ ಇರುವ ಸೆಲ್ಫಿ ಸ್ಟಾ ್ಯಂಡ್ ಹಿಂಭಾಗ ನಿಂತು ಬಿಜೆಪಿ ಮುಖಂಡರು ಮತ್ತು ಕಾರ‌್ಯಕರ್ತರು ಫೋಟೋಗಳನ್ನು ಕ್ಲಕ್ಕಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅವರು ಸೆಲ್ಫಿ ವಿತ್ ನನ್ನ ರಾಮ ಕಾರ‌್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ಮುಖಂಡರಾದ ಅಶೋಕ್ ಜಯರಾಂ, ವಿವೇಕ್, ಅಂಕಪ್ಪ, ಸಿ.ಟಿ.ಮಂಜುನಾಥ್, ಸಿದ್ದರಾಜುಗೌಡ ಇತರರು ಭಾಗವಹಿಸಿದ್ದರು.