ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದಲ್ಲಿ ‘ಅರ್ಜುನ್ ರೆಡ್ಡಿ’ ಮೂಲಕ ಅಲ್ಪ ಸಮಯದಲ್ಲೇ ಸ್ಟಾರ್ ಸ್ಥಾನಕ್ಕೇರಿದ ನಟ ವಿಜಯ್ ದೇವರಕೊಂಡ ಅವರ ಸಿನಿಪಯಣ ಇತ್ತೀಚಿನ ವರ್ಷಗಳಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ‘ಅರ್ಜುನ್ ರೆಡ್ಡಿ’ ಹಾಗೂ ‘ಗೀತ ಗೋವಿಂದಂ’ ಹಿಟ್ ಬಳಿಕ ವಿಜಯ್ ನಟನೆಯ ಯಾವುದೇ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣದೆ ಹೋಗಿರುವುದು ಗಮನಾರ್ಹ. ಇದೀಗ ಘೋಷಣೆಯಾಗಿದ್ದ ಮತ್ತೊಂದು ಸಿನಿಮಾ ಕೂಡ ಸ್ಥಗಿತಗೊಂಡಿದ್ದು, ಅವರ ಸ್ಥಗಿತಗೊಂಡ ಚಿತ್ರಗಳ ಸಂಖ್ಯೆ ನಾಲ್ಕಕ್ಕೆ ಏರಿದೆ.
ವಿಜಯ್ ನಾಯಕನಾಗಿ ನಟಿಸಿದ್ದ ‘ಕಿಂಗ್ಡಮ್’ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ನಿರಾಸೆ ಮೂಡಿಸಿತು. ಸುಮಾರು 130 ಕೋಟಿ ರೂ. ಬಜೆಟ್‌ನ ಈ ಚಿತ್ರ ಕೇವಲ 80 ಕೋಟಿ ರೂ. ಗಳಿಕೆಯೊಂದಿಗೆ ಫ್ಲಾಪ್ ಆಯಿತು. ಸಿನಿಮಾ ಬಿಡುಗಡೆಗೂ ಮುನ್ನವೇ ಸೀಕ್ವಲ್ ಘೋಷಣೆಯಾಗಿದ್ದರೂ, ಇದೀಗ ನಿರ್ಮಾಪಕ ನಾಗವಂಶಿ ‘ಕಿಂಗ್ಡಮ್’ ಭಾಗ–2 ನಿರ್ಮಾಣ ಮಾಡುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಇದರಿಂದ ವಿಜಯ್ ಕೈ ತಪ್ಪಿದ ಮತ್ತೊಂದು ಪ್ರಾಜೆಕ್ಟ್ ಪಟ್ಟಿಗೆ ಸೇರಿದೆ.
ಈಗಾಗಲೇ ‘ಹೀರೋ’, ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗನ ಮನ’ ಹಾಗೂ ನಿರ್ದೇಶಕ ಸುಕುಮಾರ್ ಜೊತೆ ಯೋಜಿಸಿದ್ದ ಸಿನಿಮಾ ಎಲ್ಲವೂ ವಿವಿಧ ಕಾರಣಗಳಿಂದ ನಿಂತು ಹೋಗಿವೆ. ‘ಲೈಗರ್’ ಸೋಲು ಬಳಿಕ ಈ ಸಮಸ್ಯೆಗಳು ಮತ್ತಷ್ಟು ಹೆಚ್ಚಾದವು ಎನ್ನಲಾಗಿದೆ.
ಪ್ರಸ್ತುತ ವಿಜಯ್ ದೇವರಕೊಂಡ ‘ರೌಡಿ ಜನಾರ್ಧನ’ ಸಿನಿಮಾದಲ್ಲಿ ತೀವ್ರ ವೈಯಲೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ, ಹಲವು ವರ್ಷಗಳ ಬಳಿಕ ರಶ್ಮಿಕಾ ಮಂದಣ್ಣ ಜೊತೆ ‘ಗೀತ ಗೋವಿಂದಂ 2’ನಲ್ಲಿ ನಟಿಸುವ ನಿರೀಕ್ಷೆಯೂ ಮೂಡಿದೆ. ಈ ಸಿನಿಮಾಗಳು ವಿಜಯ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಬಹುದೇ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

