ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯಲ್ಲಿ ನಡೆದ ಇತ್ತೀಚಿನ ರಾಜಕೀಯ ಘರ್ಷಣೆಗಳ ಕುರಿತು ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಸರ್ಕಾರ ಮತ್ತು ಗೃಹ ಇಲಾಖೆ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಪೊಲೀಸರು ಪರಿಸ್ಥಿತಿಯನ್ನು ಸರಿಯಾಗಿ ಅಂದಾಜಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುವುದು ಮತ್ತು ಹಲ್ಲೆಗೆ ಮುಂದಾಗುವುದು ಅನಿರೀಕ್ಷಿತವಲ್ಲ, ಇದನ್ನು ಪೊಲೀಸರು ಮುಂಜಾಗ್ರತಾ ಕ್ರಮಗಳ ಮೂಲಕ ತಡೆಯಬೇಕಿತ್ತು ಎಂದು ಕಿಡಿಕಾರಿದರು.
ಜನಾರ್ದನ ರೆಡ್ಡಿ ಅವರು ಬರುವ ಮೊದಲೇ ಈ ಘಟನೆ ನಡೆದಿದೆ. ಇದು ಅವರ ಹೆಸರಿಗೆ ಮಸಿ ಬಳಿಯುವ ವ್ಯವಸ್ಥಿತ ಸಂಚಿನಂತೆ ಕಾಣುತ್ತಿದೆ. ಇದರ ಹಿಂದಿರುವ ಅಸಲಿ ಕೈವಾಡ ಯಾರದ್ದು ಎಂಬುದು ತನಿಖೆಯಿಂದ ಹೊರಬರಬೇಕು ಎಂದರು.
ಈ ವರ್ಷ ಸಾಲು ಸಾಲು ಚುನಾವಣೆಗಳಿರುವುದರಿಂದ, ಇಂತಹ ಘಟನೆಗಳು ರಾಜ್ಯದ ಬೇರೆಡೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಬಳ್ಳಾರಿಯ ಸ್ಥಳೀಯ ಶಾಸಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಮತ್ತು ಶಾಂತಿ ಕಾಪಾಡುವಲ್ಲಿ ಸಹಕರಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

