ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ವಕೀಲ ಶಾ ಖಾವರ್ ನೇಮಕರಾಗಿದ್ದಾರೆ.
ಮಂಡಳಿ (Pakistan Cricket Board) ಅಧ್ಯಕ್ಷ ಸ್ಥಾನಕ್ಕೆ ರಮೀಜ್ ರಾಜಾ ರಾಜೀನಾಮೆ ನೀಡಿದ ನಂತರ, ಯಾರೂ ಈ ಹುದ್ದೆಯಲ್ಲಿ ಹೆಚ್ಚು ದಿನ ಉಳಿಯುತ್ತಿಲ್ಲ. ಮೊದಲಿಗೆ ನಜಮ್ ಸೇಥಿ ಅವರಿಗೆ ಪಿಸಿಬಿಯ ನಿರ್ವಹಣಾ ಸಮಿತಿಯ ಉಸ್ತುವಾರಿ ನೀಡಲಾಗಿತ್ತು. ಆ ನಂತರ ಈ ಹುದ್ದೆಗೆ ಝಾಕಾ ಅಶ್ರಫ್ (Zaka Ashraf) ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತ ಅಶ್ರಫ್ ಕೂಡ ಕೆಲವು ದಿನಗಳ ಹಿಂದೆ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಉಸ್ತುವಾರಿ ಸಿಎಂ ಮೊಹ್ಸಿನ್ ನಖ್ವಿ ಅವರಿಗೆ ಉಸ್ತುವಾರಿ ವಹಿಸುವ ಬಗ್ಗೆ ಚರ್ಚೆ ನಡೆದಿತ್ತು. ಇದನ್ನು ಸ್ವತಃ ನಖ್ವಿ ಕೂಡ ಖಚಿತಪಡಿಸಿದ್ದರು. ಆದರೀಗ ನಖ್ವಿ ಬದಲಿಗೆ ಶಾ ಖಾವರ್‌ಗೆ (Shah Khawar) ಪಿಸಿಬಿ ಅಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ.
ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಶಾ ಖಾವರ್, ಪಾಕಿಸ್ತಾನದ ಸುಪ್ರೀಂ ಕೋರ್ಟ್ ವಕೀಲರಾಗಿದ್ದಾರೆ. ಹಾಗೆಯೇ ಪಿಸಿಬಿಯ ಚುನಾವಣಾ ಆಯುಕ್ತರೂ ಆಗಿದ್ದಾರೆ. ಈ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಮಾತನಾಡಿದ ಅವರು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರ ಚುನಾವಣೆಯನ್ನು ಆದಷ್ಟು ಬೇಗ ನಡೆಸುವುದು ತಮ್ಮ ಆದ್ಯತೆಯಾಗಿದೆ. ಈ ಜವಾಬ್ದಾರಿಯನ್ನು ನನಗೆ ನೀಡಿದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಅನ್ವರ್-ಉಲ್-ಹಕ್ ಕಕ್ಕರ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಅಂತರ-ಪ್ರಾಂತೀಯ ಸಮನ್ವಯ (IPC) ಸಚಿವಾಲಯವು ಜನವರಿ 23, 2024 ರಂದು ಹೊರಡಿಸಿದ ಅಧಿಸೂಚನೆ ಮತ್ತು PCB ಸಂವಿಧಾನದ 7 (2) ನೇ ವಿಧಿಯ ಪ್ರಕಾರ, ಚುನಾವಣಾ ಆಯುಕ್ತರನ್ನು PCB ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದೆ.