ಹೊಸದಿಗಂತ, ವರದಿ, ಮಂಡ್ಯ :
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ 30 ಶಾಸಕರು ಕಾಂಗ್ರೆಸ್ಗೆ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಅವರನ್ನು ಚುನಾವಣೆ ಮುನ್ನ ಅಥವಾ ನಂತರ ಕಾಂಗ್ರೆಸ್ಗೆ ಬರಮಾಡಿಕೊಳ್ಳುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಈ ಸುದ್ಧಿ ತಿಳಿದರೆ ಎರಡೂ ಪಕ್ಷದವರು ಶಾಕ್ ಆಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಸ್ವಾಮಿ ತಿಳಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಸಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿಗೆ ಘರ್ವಾಪ್ಸಿ ಆದ ನಂತರ ಬಹಳಷ್ಟು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ವಿಪಕ್ಷ ನಾಯಕ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಆಡಳಿತವನ್ನು ಕಂಡು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಶಾಸಕರುಗಳು ಕಾಂಗ್ರೆಸ್ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ನಾವೇ ಸೇರಿಸಿಕೊಳ್ಳಲು ತಡ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಜಗದೀಶ್ ಶೆಟ್ಟರ್ ವಾಪಸ್ಸು ಹೋಗಿದ್ದರಿಂದ ನಮಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಬಿಜೆಪಿಯಲ್ಲಿ ನೋವಾಗಿದೆ ಎಂದು ಅವರೇ ಬಂದರು, ವಿಧಾನ ಸಭಾ ಚುನಾವಣೆಯಲ್ಲಿ ಸೋತರು. ಬಳಿಕ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಇದೀಗ ವಾಪಸ್ಸು ಹೋಗಿದ್ದಾರೆ. ನಮಗೇನೂ ನಷ್ಟವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುಮಲತಾ ನಮ್ಮನ್ನು ಸಂಪರ್ಕಿಸಿಲ್ಲ :
ಕಾಂಗ್ರೆಸ್ಗೆ ಹೋಗಲ್ಲ, ಬಿಜೆಪಿಯಿಂದಲೇ ಟಿಕೆಟ್ ಬಯಸುತ್ತನೇ. ಬಿಜೆಪಿಯಿಂದಲೇ ಸಂಸದರಾಗಲು ಇಚ್ಚಿಸುತ್ತೇನೆ ಎಂದು ಸುಮಲತಾ ಅವರೇ ಹೇಳಿದ್ದಾರೆ. ಇನ್ನು ನಮ್ಮನ್ನಾದರೂ ಏಕೆ ಸಂಪರ್ಕಿಸುತ್ತಾರೆ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.
ಅವರಿಗೂ ನಮಗೂ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಅಂಬರೀಶ್ ಮತ್ತು ನಾನು ಒಳ್ಳೆಯ ಸ್ನೇಹಿತರು, ಅವರ ಕಾಲಾನಂತಹ ಸುಮಲತಾ ರಾಜಕಾರಣಕ್ಕೆ ಬಂದಿದ್ದಾರೆ. ಅವರನ್ನು ನಾನಾಗಲೀ, ನಮ್ಮ ಶಾಸಕರು ಮತ್ತು ನಮ್ಮ ನಾಯಕರಾಗಲೀ ಯಾರೂ ಸಂಪರ್ಕ ಮಾಡಿಲ್ಲ. ಒಂದು ವೇಳೆ ಸಂಪರ್ಕ ಮಾಡಿದ್ದರೆ ಯಾರು ಸಂಪರ್ಕ ಮಾಡಿದ್ದರೆಂಬುದನ್ನು ಮೇಡಂ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸುಮಲತಾ ಅವರು ಅಧಿಕೃತವಾಗಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ. ಚಲುವರಾಯಸ್ವಾಮಿ ಕರೆಯಲಿಲ್ಲ, ಕೇಳಲಿಲ್ಲ ಎನ್ನುತ್ತಾರೆ. ನಾವು ಹಿಂದೆ ಕೇಳಿದ್ದೆವು. ಆದರೆ ಬರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯಲ್ಲಿ ನಾವು ಎಲ್ಲ 11 ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದೆವು. ಈಗ ರಾಜ್ಯ ಮತ್ತು ಜಿಲ್ಲೆಯ ಜನರ ಆಶೀರ್ವಾದದಿಂದ 10 ಸ್ಥಾನಗಳನ್ನು ಗಳಿಸಿದ್ದೇವೆ. ಜಿಲ್ಲೆಯ ಜನ ಅಭಿವೃದ್ಧಿ ಕಡೆಗೆ ಗಮನ ಹರಿಸಲು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆ ತುಂಬಾ ಹಿಂದುಳಿದಿದೆ. ನಾವು ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವುದರ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದರು.