ಹೊಸದಿಗಂತ, ವಿಜಯಪುರ:
ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಮಹಾರಾಷ್ಟ್ರ ಮೂಲದ ಕೈದಿಯೊಬ್ಬ ಜೈಲಿನೊಳಗಿದ್ದ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮೂವರು ಕೈದಿಗಳು ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದ್ದರು. ಜೈಲಿನಲ್ಲಿ ಪ್ರಸಾದ ಮತ್ತು ಪೂಜೆ ಸಲ್ಲಿಸುವ ಮೂಲಕ ರಾಮೋತ್ಸವವನ್ನು ಆಚರಿಸಿದರು. ಇದಾದ ಬಳಿಕ ಜನವರಿ 23ರಂದು ನಮ್ಮ ಮೇಲೆ ಜೈಲು ಅಧಿಕಾರಿಗಳು ಹಾಗೂ ಇತರೆ ಜಾತಿಯ 30ಕ್ಕೂ ಹೆಚ್ಚು ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಗೂಂಡಾ ಶೇಖ್ ಮೊಹಮ್ಮದ್ ಮೋದಿ ಮತ್ತು ಆತನ ತಂಡದಿಂದ ದಾಳಿ ಆಗಿದೆ. ಹಿಂದೂ ಕೈದಿಯೊಬ್ಬ ಜೈಲಿನಿಂದ ವಿಡಿಯೋ ಪೋಸ್ಟ್ ಮಾಡಿದ್ದಾನೆ. ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸುವಂತಿಲ್ಲ. ಹಾಗಿದ್ದರೆ ಜೈಲಿನೊಳಗೆ ಕೈದಿ ಬಳಿ ಮೊಬೈಲ್ ಹೇಗೆ ಹೋಯ್ತು? ವೀಡಿಯೋ ಹೇಗೆ ಬಿಡುಗಡೆಯಾಗಿದೆ ಎಂಬುದು ಚರ್ಚೆಯ ವಿಷಯವಾಗಿದೆ.
ಮಹಾರಾಷ್ಟ್ರದ ಜೈಲಿನಲ್ಲಿ ಹೊಡೆದಾಟದ ಹಿನ್ನೆಲೆಯಲ್ಲಿ ಮೂವರು ಕೈದಿಗಳನ್ನು ವಿಜಯಪುರ ಜೈಲಿಗೆ ಸ್ಥಳಾಂತರಿಸಲಾಗಿದೆ. ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಇತರೆ ಕೈದಿಗಳ ಜತೆ ವಾಗ್ವಾದ ನಡೆಸಿ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿತ್ತು. ಈ ಕಾರಣಕ್ಕೆ ಬೇರೆ ವಿಚಾರ ಹೇಳಿದ್ದಾರೆ ಎಂದು ಜೈಲು ಸೂಪರಿಂಟೆಂಡೆಂಟ್ ಮ್ಯಾಗೇರಿ ಹೇಳಿದ್ದಾರೆ.