ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಇಂದೋರ್ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಕುಡಿದು ಹಲವು ಮಂದಿ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನ ಮಾದರಿಯಲ್ಲಿ ಒಳಚರಂಡಿ ನೀರಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಪ್ರಾಥಮಿಕ ವರದಿಗಳಿಂದ ದೃಢಪಟ್ಟಿದೆ.
ಅಲ್ಲಿಯ ನಿವಾಸಿಗಳಲ್ಲಿ ಉಂಟಾದ ವಾಂತಿ–ಅತಿಸಾರ ಉಲ್ಬಣಕ್ಕೆ ಮಾಲಿನ್ಯಗೊಂಡ ನೀರೇ ಕಾರಣ ಎಂಬುದನ್ನು ಪ್ರಯೋಗಾಲಯದ ಪರೀಕ್ಷೆಗಳಿಂದ ತಿಳಿದುಬಂದಿದೆ.
ವರದಿಗಳ ಪ್ರಕಾರ, ನೀರಿನ ಮಾದರಿಗಳಲ್ಲಿ ವೈಬ್ರಿಯೋ ಕೊಲ, ಶಿಗೆಲ್ಲಾ ಮತ್ತು ಇ.ಕೋಲಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಇವು ಸಾಮಾನ್ಯವಾಗಿ ತೀವ್ರ ಅತಿಸಾರ ಮತ್ತು ವಾಂತಿಗೆ ಹಾಗೂ ಗಂಭೀರ ಜೀರ್ಣಾಂಗ ಸೋಂಕುಗಳಿಗೆ ಕಾರಣವಾಗುತ್ತವೆ. ಸತತ ಎಂಟು ವರ್ಷಗಳಿಂದ ದೇಶದ ಸ್ವಚ್ಛ ನಗರಗಳಲ್ಲಿ ಮೊದಲ ಸ್ಥಾನ ಪಡೆದಿರುವ ಇಂದೋರ್‌ನಲ್ಲಿ ಕುಡಿಯುವ ನೀರು ಕಲುಷಿತಗೊಂಡ ಬಗ್ಗೆ ವರದಿಯಾಗಿರುವುದು ಸುರಕ್ಷತೆಯ ಬಗ್ಗೆ ಗಂಭೀರ ಆತಂಕ ಮೂಡಿಸಿದೆ.
ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಡಾ. ಮಾಧವ ಪ್ರಸಾದ್ ಹಸಾನಿ ಅವರ ಪ್ರಕಾರ, ನಗರದ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಮಾಲಿನ್ಯಗೊಂಡ ಕುಡಿಯುವ ನೀರೇ ರೋಗದ ಮೂಲ ಎಂದು ದೃಢಪಟ್ಟಿದೆ. ಭಗೀರಥಪುರ ಪೊಲೀಸ್ ಚೌಕಿ ಬಳಿ ನೆಲದಲ್ಲಿ ಹಾಕಲಾದ ಪ್ರಮುಖ ನೀರು ಪೂರೈಕೆ ಪೈಪ್‌ಲೈನ್ ಒಡೆದಿದ್ದರಿಂದ ಚರಂಡಿ ನೀರು ಕುಡಿಯುವ ನೀರಿಗೆ ಮಿಶ್ರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಸಮಿತಿಯ ಅಧ್ಯಕ್ಷರಾಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ದುಬೆ,ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಕುದಿಸಿ ಕುಡಿಯುವಂತೆ ನಿವಾಸಿಗಳಿಗೆ ಸಲಹೆ ನೀಡಲಾಗಿದೆ ಎಂದರು. ಅಲ್ಲದೇ ಹೊಸ ನೀರಿನ ಮಾದರಿಗಳನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಉಂಟಾಗದಂತೆ ರಾಜ್ಯದಾದ್ಯಂತ ಅಗತ್ಯ ಮಾನಕ ಕಾರ್ಯಾಚರಣೆ ವಿಧಾನ (SOP) ರೂಪಿಸಲಾಗುವುದು ಎಂದು ದುಬೆ ತಿಳಿಸಿದ್ದಾರೆ.
ಇನ್ನೂ ಈ ಕಲುಷಿತ ನೀರು ಸೇವನೆಯಿಂದ ಉಂಟಾದ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC), ಹಲವು ದಿನಗಳಿಂದ ದೂರುಗಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವರದಿಗಳನ್ನು ಉಲ್ಲೇಖಿಸಿ ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.

