Friday, January 2, 2026

ಹಿಂಸಾಚಾರದ ನಡುವೆ ಬಾಂಗ್ಲಾದತ್ತ ಹೊರಟು ನಿಂತರೆ ಟೀಮ್ ಇಂಡಿಯಾ ಆಟಗಾರರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರದ ಕಾರಣ ಬಾಂಗ್ಲಾ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಲ್ಲಿ (IPL) ಆಡಲು ಅನುಮತಿ ನೀಡಿರುವುದಕ್ಕೆ ಭಾರತದಲ್ಲಿ ಅಸಾಮಾಧಾನ ಸ್ಫೋಟಗೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೂ ಜನ ಛೀಮಾರಿ ಹಾಕುತ್ತಿದ್ದಾರೆ.

ಇದೆಲ್ಲದರ ನಡುವೆ ಬಿಸಿಸಿಐ ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದೆನೆಂದರೆ, ಏಕದಿನ ಹಾಗೂ ಟಿ20 ಸರಣಿಗಾಗಿ ಟೀಂ ಇಂಡಿಯಾ, ಬಾಂಗ್ಲಾದೇಶ ಪ್ರವಾಸವನ್ನು ಮಾಡಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಇಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದೆ.

ಈ ಪ್ರವಾಸದ ಬಗ್ಗೆ ಖಚಿತ ಮಾಹಿತಿ ನೀಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಒಟ್ಟು 6 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ ಭಾರತದ ಬಾಂಗ್ಲಾದೇಶ ಪ್ರವಾಸ ಏಕದಿನ ಸರಣಿಯೊಂದಿಗೆ ಆರಂಭವಾಗಲಿದೆ. ಹಾಗೆಯೇ ಟಿ20 ಸರಣಿಯೊಂದಿಗೆ ಅಂತ್ಯವಾಗಲಿದೆ.

ಆದಾಗ್ಯೂ ಟೀಂ ಇಂಡಿಯಾದ ಈ ಪ್ರವಾಸಕ್ಕೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಉಭಯ ತಂಡಗಳು ಸೆಪ್ಟೆಂಬರ್ ತಿಂಗಳಲ್ಲಿ ಮುಖಾಮುಖಿಯಾಗಲಿವೆ. ವೇಳಾಪಟ್ಟಿಯ ಪ್ರಕಾರ ಎರಡು ತಂಡಗಳ ನಡುವೆ ಮೊದಲು ಏಕದಿನ ಸರಣಿ ನಡೆಯಲಿದ್ದು, ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 1 ರಂದು ನಡೆಯಲಿದೆ. ಆ ಬಳಿಕ ಎರಡನೇ ಪಂದ್ಯ ಸೆಪ್ಟೆಂಬರ್ 3 ಹಾಗೂ ಮೂರನೇ ಪಂದ್ಯ ಸೆಪ್ಟೆಂಬರ್ 6 ರಂದು ನಡೆಯಲಿದೆ. ಏಕದಿನ ಸರಣಿಯ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಪಂದ್ಯಗಳು ಸೆಪ್ಟೆಂಬರ್ 9, 12 ಮತ್ತು 13 ರಂದು ನಡೆಯಲಿವೆ.

ಭಾರತ ತಂಡವು ಕೊನೆಯ ಬಾರಿಗೆ 2022-23 ರಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಿತ್ತು, ಅಲ್ಲಿ ಏಕದಿನ ಸರಣಿಯನ್ನು ಸೋತಿತ್ತು. ಬಾಂಗ್ಲಾದೇಶ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು.

error: Content is protected !!