ಹೊಸದಿಗಂತ ವರದಿ ಹುಬ್ಬಳ್ಳಿ:
ಕಂದಾಯ ಇಲಾಖೆಯ ವಿವಿಧ ವಿಭಾಗಗಳಿಗೆ ಎರಡು ಸಾವಿರ ಸಿಬ್ಬಂದಿ ಶೀಘ್ರದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಬುಧವಾರ ನಗರದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ರೆಕಾರ್ಡ್ ರೂಮ್’ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಇದರಿಂದ ಇಲಾಖೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲಾಗುತ್ತದೆ. ಇಲಾಖೆಯ ಆಧುನಿಕರಣಕ್ಕೆ ₹20ಕೋಟಿ ವೆಚ್ಚದ ನೂತನ ತತ್ರಜ್ಞಾನದ ಸಲಕರಣೆ ಖರೀದಿಸಲು ಟೆಂಡರ್ ಕರೆಯಲಾಗುತ್ತಿದೆ ಎಂದರು.
ಏಜೆಂಟರ್ ಹಾವಳಿ ತಪ್ಪಿಸಲು, ಎಲ್ಲೆಲ್ಲಿ ಏಜೆಂಟರ್ ಹಾವಳಿ ಇದೆ ಎಂದು ಮಾಹಿತಿ ಪಡೆಯುತ್ತಿದ್ದೇವೆ.
ಏಜೆಂಟರ್ ಪ್ರಭಾವ ಇರುವುದರಿಂದ ಕಡತ ವಿಲೇವಾರಿ ಆಗುತ್ತಿರಲಿಲ್ಲ. ಯಾವ ಸಿಬ್ಬಂದಿಯಲ್ಲಿ ಎಷ್ಟು ಮನವಿ ಪತ್ರಗಳಿವೆ ಎನ್ನುವುದು ತಹಶೀಲ್ದಾರ್’ಗೆ ತಿಳಿಯುತ್ತಿರಲಿಲ್ಲ. ಇ-ಕಚೇರಿ ಅನುಷ್ಠಾನದಿಂದ ಯಾರ ಬಳಿ ಎಷ್ಟು ದಿನ ಮನವಿ ಇದೆ ಎಂದು ತಹಶೀಲ್ದಾರ್’ಗೆ ತಿಳಿಯುತ್ತದೆ. ಅಲ್ಲಿ ವಿಳಂಬವಾದರೆ ನಾವು ಅವರಿಗೆ ನೋಟಿಸ್ ನೀಡಿ ಎಚ್ಚರಿಸುತ್ತೇವೆ. ಆಗ ಅವರು ಕೆಳಹಂತದ ಸಿಬ್ಬಂದಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಇದರಿಂದ ಏಜೆಂಟರ್ ಹಾವಳಿ ಕಡಿಮೆಯಾಗುತ್ತದೆ’ ಎಂದು ಹೇಳಿದರು.